ಕಳಸ ಲೈವ್ ವರದಿ
ಹದಿನೈದು ವರ್ಷದ ಅಸಹಾಯಕ ಬಾಲಕನನ್ನು ಬೆದರಿಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕನಿಗೆ ಚಿಕ್ಕಮಗಳೂರಿನ ವಿಶೇಷ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಬಾಲಕನ ಜೀವನದೊಂದಿಗೆ ಚೆಲ್ಲಾಟವಾಡಿದ ಆರೋಪಿಗೆ 20 ವರ್ಷಗಳ ಕಾಲ ಸಜಾ ವಿಧಿಸಿ ಸಮಾಜಕ್ಕೆ ಗಟ್ಟಿ ಸಂದೇಶ ರವಾನಿಸಲಾಗಿದೆ.
(ಘಟನೆಯ ವಿವರ) ಮೂಲತಃ ಬಾಳೆಹೊನ್ನೂರು ಸಮೀಪದ ಮಾಗುಂಡಿ ನಿವಾಸಿಯಾದ ಖಾಸಿಂ (55) ಎಂಬಾತ ಕಳಸದ ಭದ್ರಾಸೈಟ್ ಹೆಮ್ಮಕ್ಕಿ ಗ್ರಾಮದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದನು. ಕಳೆದ 6-7 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಈತ, ತನ್ನ ಅಂಗಡಿ ಬಳಿ ಬರುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡಿದ್ದನು. ಬಾಲಕನನ್ನು ಪುಸಲಾಯಿಸಿ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಆರೋಪಿ, “ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದನು. ಇದರಿಂದ ಭಯಭೀತನಾದ ಬಾಲಕ ನೋವನ್ನು ಸಹಿಸಿಕೊಂಡು ಮೌನವಾಗಿದ್ದನು.
ಆರೋಪಿಯ ಕೃತ್ಯವನ್ನು ಯಾರೋ ಅಪರಿಚಿತರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ವಿಷಯ ಬಾಲಕನ ತಾಯಿಯ ಗಮನಕ್ಕೆ ಬಂದಿದೆ. ತೋಟದ ಕೆಲಸದಲ್ಲಿದ್ದ ತಾಯಿ, ವಿಡಿಯೋ ನೋಡಿ ದಿಗಿಲುಗೊಂಡು ಮನೆಯಲ್ಲಿ ಬಾಲಕನನ್ನು ವಿಚಾರಿಸಿದಾಗ ಆರೋಪಿಯ ಕಿರುಕುಳದ ಸಂಪೂರ್ಣ ಸತ್ಯ ಹೊರಬಂದಿದೆ. ಕೂಡಲೇ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.
ಪ್ರಕರಣದ ತನಿಖೆ ನಡೆಸಿದ ಕಳಸ ಪೊಲೀಸರು ನ್ಯಾಯಾಲಯಕ್ಕೆ ಸಾಕ್ಷ್ಯಧಾರಗಳ ಸಮೇತ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಚಿಕ್ಕಮಗಳೂರಿನ ಅಡಿಷನಲ್ ಜಿಲ್ಲಾ ಮತ್ತು ಸತ್ರ (ವಿಶೇಷ) ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ ಅವರು ಆರೋಪಿ ತಪ್ಪಿತಸ್ಥನೆಂದು ನಿರ್ಧರಿಸಿ ಪೋಕ್ಸೋ ಕಾಯ್ದೆಯಡಿ: 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ. ಭಾರತೀಯ ನ್ಯಾಯ ಸಂಹಿತೆಯಡಿ: 1 ವರ್ಷ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆಯನ್ನು ನೀಡಲಾಗಿದೆ.
ಪ್ರಕರಣದ ಗಂಭೀರತೆಯನ್ನು ಅರಿತು ಚುರುಕಾಗಿ ತನಿಖೆ ನಡೆಸಿದ ಕಳಸ ವೃತ್ತ ನಿರೀಕ್ಷಕ ಪ್ರಕಾಶ್ ಹಾಗೂ ಅವರ ತಂಡದ ಪಿಎಸೈಚಂದ್ರಶೇಖರ್, ಮೇನಕ, ಪರಮೇಶ್, ಶಿವಕುಮಾರ್, ಗಿರೀಶ್ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಬಿ. ಭರತ್ ಕುಮಾರ್ ಅವರು ಪ್ರಬಲವಾಗಿ ವಾದ ಮಂಡಿಸಿದ್ದರು.
