
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾದ್ಯಂತ ಗುರುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಗಾಳಿಗಂಡಿ ಪ್ರದೇಶದಲ್ಲಿ ವ್ಯಾಪಕ ಅನಾಹುತಗಳು ಸಂಭವಿಸಿವೆ. ಗಾಳಿಯ ರಭಸಕ್ಕೆ ಮನೆ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲ್ಚಾವಣಿಗಳು ಹಾರಿಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ಗಾಳಿಗಂಡಿಯ ನಿವಾಸಿ ಮಹಮ್ಮದ್ ಜುಬೇರ್ ಎಂಬುವವರ ಮನೆಗೆ ಭಾರಿ ಹಾನಿಯಾಗಿದೆ. ಸಂಜೆಯ ವೇಳೆ ಹಠಾತ್ ಬೀಸಿದ ಬಿರುಗಾಳಿಗೆ ಜುಬೇರ್ ಅವರ ಮನೆಯ ಗಟ್ಟಿಮುಟ್ಟಾಗಿದ್ದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಬಂದಿದೆ. ಈ ಭೀಕರ ಸಂದರ್ಭದಲ್ಲಿ ಮನೆಯೊಳಗೆ ಇದ್ದ ಕುಟುಂಬ ಸದಸ್ಯರು ಗಾಳಿಯ ತೀವ್ರತೆಗೆ ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್, ಮೇಲ್ಚಾವಣಿ ಹಾರುತ್ತಿದ್ದಂತೆಯೇ ಸಮಯಪ್ರಜ್ಞೆ ಮೆರೆದು ಮನೆಯಿಂದ ಹೊರ ಓಡಿ ಬಂದಿದ್ದರಿAದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಛಾವಣಿ ಹಾರಿಹೋದ ಪರಿಣಾಮ ಮನೆಯಲ್ಲಿದ್ದ ಆಹಾರ ಧಾನ್ಯಗಳು, ಬಟ್ಟೆಬರೆ ಹಾಗೂ ದಿನಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳು ಮಳೆಗೆ ನೆನೆದು ಹಾಗೂ ಗಾಳಿಗೆ ಸಿಲುಕಿ ಸಂಪೂರ್ಣ ಹಾನಿಯಾಗಿವೆ.
ವಸತಿ ಮನೆಗಳಲ್ಲದೆ, ಇಲ್ಲಿನ ಸ್ಥಳೀಯ ಸಮುದಾಯ ಭವನ ಹಾಗೂ ಸರ್ಕಾರಿ ಶಾಲೆಯ ಮೇಲ್ಚಾವಣಿಯ ಹೆಂಚುಗಳು ಸಹ ಗಾಳಿಗೆ ಹಾರಿಹೋಗಿವೆ.
“ಗಾಳಿಗಂಡಿ ಪ್ರದೇಶವು ಭೌಗೋಳಿಕವಾಗಿ ಅತಿ ಹೆಚ್ಚು ಗಾಳಿ ಮತ್ತು ಮಳೆ ಬೀಸುವ ಪ್ರದೇಶವಾಗಿದೆ. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಇಂತಹ ಅನಾಹುತಗಳು ಇಲ್ಲಿ ಮರುಕಳಿಸುತ್ತಲೇ ಇವೆ. ಇದು ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದೆ,” ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
