
ಕಳಸ ಲೈವ್ ವಿಶೇಷ ವರದಿ
(ಸುದೀಶ್ ಸುವರ್ಣ)
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಕಳಸ–ಕುದುರೆಮುಖ–ಎಸ್.ಕೆ. ಬಾರ್ಡರ್ ರಸ್ತೆ ಮತ್ತೊಮ್ಮೆ ಸಾರ್ವಜನಿಕರ ನಿರೀಕ್ಷೆಗೆ ತಣ್ಣೀರು ಎರಚಿದೆ. ಈ ಬಾರಿಯಾದರೂ ರಸ್ತೆ ಡಾಂಬರೀಕರಣ ಪೂರ್ಣಗೊಂಡು ಸುಗಮ ಸಂಚಾರ ಸಾಧ್ಯವಾಗಬಹುದು ಎಂಬ ಆಶಾಭಾವನೆ ಮೂಡಿದ್ದರೂ, ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆಯ ನೆಪವೊಡ್ಡಿ ಗುತ್ತಿಗೆದಾರರು ಕಾಮಗಾರಿ ಅರ್ಧದಲ್ಲೇ ನಿಲ್ಲಿಸಿರುವುದರಿಂದ ಈ ಮಳೆಗಾಲದಲ್ಲೂ ಜನರು ಹೊಂಡ-ಗುAಡಿಗಳ ನಡುವೆ ಜೀವಭಯದ ಪ್ರಯಾಣ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಒಮ್ಮೆ ರಾಜ್ಯಕ್ಕೆ ಮಾದರಿಯಾಗಿದ್ದ ಈ ರಸ್ತೆ ಇಂದು ರಾಜ್ಯದಲ್ಲೇ ಅತ್ಯಂತ ಹದಗೆಟ್ಟ ರಸ್ತೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ ಎಂಬುದು ದುಃಖಕರ ವಾಸ್ತವ. ಕುದುರೆಮುಖ ಕಬ್ಬಿಣ ಕಂಪನಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ರಸ್ತೆ ಉತ್ತಮ ನಿರ್ವಹಣೆಯಿಂದ ಪ್ರಸಿದ್ಧಿಯಾಗಿತ್ತು. ಆದರೆ ಕಂಪನಿಗೆ ಬೀಗ ಬಿದ್ದ ಬಳಿಕ ಈ ರಸ್ತೆಯ ದುಸ್ಥಿತಿಯೂ ಆರಂಭವಾಯಿತು. ಕಳೆದ ಎರಡು ದಶಕಗಳಲ್ಲಿ ಅನೇಕ ಶಾಸಕರು, ಸಂಸದರು ಬದಲಾದರೂ ಕೇವಲ 40 ಕಿ.ಮೀ ಉದ್ದದ ಈ ರಾಜ್ಯ ಹೆದ್ದಾರಿಯನ್ನು ಗುಣಮಟ್ಟದ ರಸ್ತೆಯನ್ನಾಗಿ ರೂಪಿಸಲು
ಸಾಧ್ಯವಾಗದಿರುವುದು ಆಡಳಿತದ ವೈಫಲ್ಯವಷ್ಟೇ ಅಲ್ಲ, ಜನಪ್ರತಿನಿಧಿಗಳ ಬದ್ಧತೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತದೆ.
2025ರ ಜೂನ್ನಲ್ಲಿ ಈ ರಸ್ತೆಯ ಮರುಡಾಂಬರೀಕರಣಕ್ಕಾಗಿ ಒಟ್ಟು 13 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿತ್ತು. ಲೋಕೋಪಯೋಗಿ ಇಲಾಖೆಯಿಂದ 7 ಕಿ.ಮೀ ರಸ್ತೆ ಕಾಮಗಾರಿಗೆ 7 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 6 ಕಿ.ಮೀ ರಸ್ತೆ ದುರಸ್ತಿಗೆ 6 ಕೋಟಿ ಮಂಜೂರಾಗಿತ್ತು. ಆದರೆ ಅನುದಾನ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ಜನರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ 7 ಕಿ.ಮೀ ಪೈಕಿ ಕೇವಲ 4 ಕಿ.ಮೀ ರಸ್ತೆ ಮಾತ್ರ ಪೂರ್ಣಗೊಂಡಿದ್ದು, ಉಳಿದ 3 ಕಿ.ಮೀ ಕಾಮಗಾರಿ ಸ್ಥಗಿತಗೊಂಡಿದೆ. ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಏಕೆ ನಿಂತಿತು ಎಂಬ ಪ್ರಶ್ನೆಗೆ ಅಧಿಕಾರಿಗಳು “ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದ ಗುತ್ತಿಗೆದಾರರು ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಕಾಮಗಾರಿ ನಿಲ್ಲಿಸಿದ್ದಾರೆ.ಈ ಬಾರಿ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಗುತ್ತಿಗೆದಾರರು ದರ ಏರಿಳಿತದ ಸಾಧ್ಯತೆಯನ್ನು ಅರಿತೇ ಒಪ್ಪಂದಕ್ಕೆ ಸಹಿ ಹಾಕಿರುತ್ತಾರೆ. ಹೀಗಿರುವಾಗ ಕಾಮಗಾರಿ ಅರ್ಧದಲ್ಲೇ ನಿಲ್ಲಿಸುವುದು ಕೇವಲ ನಿರ್ಲಕ್ಷ್ಯವಲ್ಲ, ಸಾರ್ವಜನಿಕ ಹಣ ಮತ್ತು ವಿಶ್ವಾಸ ಎರಡರ ಮೇಲಿನ ಅನ್ಯಾಯವಾಗಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 6 ಕಿ.ಮೀ ರಸ್ತೆ ಕಾಮಗಾರಿ ಇನ್ನೂ ಆರಂಭವಾಗದೇ ಇರುವುದು ಇನ್ನಷ್ಟು ಆತಂಕಕಾರಿ ಸಂಗತಿ. ಸರ್ಕಾರದ ಸಂಬಳ ಪಡೆದು ಕೆಲಸ ಮಾಡುವ ಅಧಿಕಾರಿಗಳು ಗುತ್ತಿಗೆದಾರರ ಮೇಲಿನ ಮೃದು ಧೋರಣೆ ತಾಳುತ್ತಿರುವುದು ಜನರಲ್ಲಿ ಅನುಮಾನ ಮೂಡಿಸಿದೆ. ಪ್ರಶ್ನಿಸಿ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳ ಮೌನವೂ ಸಾರ್ವಜನಿಕರ ಅನುಮಾನವನ್ನು ಗಾಢಗೊಳಿಸಿದೆ.
ಪ್ರತೀಬಾರಿಯು ಈ ರಸ್ತೆಯ ಕಾಮಗಾರಿಯಲ್ಲಿ ವಿಳಂಬವಾಗಿ ನಾನಾ ತೊಂದರೆಗಳು ಆಗುತ್ತಿರುವುದರಿಂದ ಶಾಪಗ್ರಸ್ತ ಕುದುರೆಮುಖ ರಸ್ತೆ ಎನ್ನುವ ಹಣೆ ಪಟ್ಟಿಯನ್ನು ಕಟ್ಟಿಕೊಂಡ ಈ ರಸ್ತೆಗೆ ಈ ಹಿಂದೆ ಇದೇ ರಸ್ತೆಯ ಕಾಮಗಾರಿ ವಿಳಂಬವಾದಾಗ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಮೂರು ಪಕ್ಷಗಳ ನಾಯಕರು ಭರವಸೆಗಳ ಸುರಿಮಳೆಗೈದಿದ್ದರು. “ಹಿಂದಿನವರು ಮಾಡಲಿಲ್ಲ, ನಾವು ಮಾಡಿಯೇ ತೀರುತ್ತೇವೆ” ಎಂದು ಹೇಳಿದ್ದರು. ಆದರೆ ಮೂರು ಪಕ್ಷಗಳು ಕೂಡ ಅಧಿಕಾರಕ್ಕೆ ಬಂದರೇ ಹೊರತು ರಸ್ತೆಯ ಚಿತ್ರಣ ಮಾತ್ರ ಬದಲಾಗಲಿಲ್ಲ.
ಈ ರಸ್ತೆ ಕೇವಲ ಸಂಚಾರದ ಮಾರ್ಗವಲ್ಲ; ಕಳಸ ಭಾಗದ ಜನರ ಜೀವನಾಡಿ. ಶಿಕ್ಷಣ, ಆರೋಗ್ಯ, ವ್ಯಾಪಾರ ಎಲ್ಲದರಿಗೂ ಕರಾವಳಿಯನ್ನೇ ಅವಲಂಬಿಸಿರುವ ಸಾವಿರಾರು ಜನರಿಗೆ ಈ ರಸ್ತೆ ಅತ್ಯಗತ್ಯ. ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ರೋಗಿಗಳನ್ನು ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲಾಗದೆ ಅನೇಕ ಅಮೂಲ್ಯ ಜೀವಗಳು ಆಂಬ್ಯುಲೆನ್ಸ್ಗಳಲ್ಲೇ ಕೊನೆಯುಸಿರೆಳೆದ ಘಟನೆಗಳು ಜನರ ನೆನಪಿನಲ್ಲಿ ಇನ್ನೂ ಹಸಿಯಾಗಿವೆ. ಇಂತಹ ಪರಿಸ್ಥಿತಿಯಲ್ಲೂ ರಸ್ತೆ ಅಭಿವೃದ್ಧಿಗೆ ಅಗತ್ಯ ಗಂಭೀರತೆ ತೋರದಿರುವುದು ಆಡಳಿತದ ಮಾನವೀಯತೆಯ ಕೊರತೆಯನ್ನು ತೋರಿಸುತ್ತದೆ.
ಅತ್ಯಂತ ಗಂಭೀರ ಸಂಗತಿ ಎಂದರೆ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅಧಿಕಾರಿಗಳೇ ಅವರ ಪರ ವಾದಿಸುತ್ತಿರುವಂತಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ಒಪ್ಪಂದ ಉಲ್ಲಂಘಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಅಧಿಕಾರ ಸರ್ಕಾರಕ್ಕಿದೆ. ಕಾಮಗಾರಿ ವಿಳಂಬವಾದ ಪ್ರತಿದಿನಕ್ಕೂ ದಂಡ ವಿಧಿಸುವ ಅವಕಾಶವೂ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ಗಳಿಗೆ ಇದೆ. ಆದರೆ ಈ ಅಧಿಕಾರಗಳು ಕಾಗದದಲ್ಲೇ ಉಳಿದಿವೆಯೇ ಎಂಬ ಪ್ರಶ್ನೆ ಈಗ ಜನರ ಮನಸ್ಸಿನಲ್ಲಿ ಮನೆ ಮಾಡಿದೆ.
ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಮಳೆಗಾಲದ ಪ್ರತೀ ವರ್ಷ ಜನರನ್ನು ಅಪಾಯದ ಅಂಚಿಗೆ ತಳ್ಳುವ ಈ ರಸ್ತೆಗೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಮುಕ್ತಿ ಬೇಕಾಗಿದೆ. ಇಲ್ಲವಾದರೆ ಅಭಿವೃದ್ಧಿಯ ಹೆಸರಿನಲ್ಲಿ ನೀಡುವ ಭರವಸೆಗಳು ಜನರ ಪಾಲಿಗೆ ಮತ್ತೊಂದು ರಾಜಕೀಯ ನಾಟಕವಾಗಿಯೇ ಉಳಿಯುತ್ತವೆ.
