ಕಳಸ ಲೈವ್ ವಿಶೇಷ ವರದಿ
(ಸುದೀಶ್ ಸುವರ್ಣ ಕಳಸ)
ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ಸಾಮಾಜಿಕ ಜಾಲತಾಣಗಳನ್ನು ಗಮನಿಸಿದರೆ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡುವ ಸುದ್ಧಿಗಳೇ ಹೆಚ್ಚಾಗುತ್ತಿವೆ. ಹದಿಹರೆಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು, ಸಂಸಾರ ನಿಭಾಯಿಸುವ ಮಧ್ಯವಯಸ್ಕರು ಹಾಗೂ ಜೀವನದ ಎಲ್ಲ ಏಳುಬೀಳುಗಳನ್ನು ಕಂಡ ವೃದ್ಧರವರೆಗೆ..ಆತ್ಮಹತ್ಯೆ ಎಂಬ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚುತ್ತಿದೆ.
ಇವತ್ತು ಬೆಳಿಗ್ಗೆಯಷ್ಟೆ ಬೆಳಿಗ್ಗೆ ಎದು ವಾಟ್ಸಾಪ್ ನೋಡಿದಾಗ ಕಳೆದ ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ ಹೊರನಾಡು ಬಾಗದ ಪುರಂದರ ಎಂಬ ಯವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯಿತು.ಬದುಕಿ ಬಾಳ ಬೇಕಾದ ಜೀವ ಕೆಟ್ಟ ನಿರ್ಧಾರ ಮಾಡಿ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟ.
ಇಲ್ಲಿ ಕಾಡುವ ಪ್ರಶ್ನೆ ಎಂದರೆ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಅಂತಿಮ ಪರಿಹಾರವೇ? ಖಂಡಿತವಾಗಿಯೂ ಅಲ್ಲ.
ಸಮಸ್ಯೆಗಳು ಯಾರಿಗೆ ಇಲ್ಲ? ಬೆಟ್ಟದಂಥ ಸವಾಲಿದ್ದರೂ ಸಣ್ಣದೊಂದು ನಗುವಿನಿಂದ ಎದುರಿಸು ಎಂಬುದು ಹಿರಿಯರ ಮಾತು. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಯೂ ತನ್ನದೇ ಆದ ಸಂಕಷ್ಟಗಳನ್ನು ಎದುರಿಸುತ್ತಿರುತ್ತಾನೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ, ಯುವಕರಿಗೆ ಉದ್ಯೋಗದ ಚಿಂತೆ, ಕೌಟುಂಬಿಕ ಕಲಹಗಳು, ಆರ್ಥಿಕ ಮುಗ್ಗಟ್ಟು, ಪ್ರೀತಿಯಲ್ಲಿ ವೈಫಲ್ಯ, ಆರೋಗ್ಯದ ಸಮಸ್ಯೆಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸಮಸ್ಯೆಗಳು ಜೀವನದ ಒಂದು ಭಾಗವೇ ಹೊರತು, ಅದೇ ಇಡೀ ಜೀವನವಲ್ಲ. ಕತ್ತಲೆಯ ನಂತರ ಬೆಳಕು ಬರುವುದು ಎಷ್ಟು ಸತ್ಯವೋ, ಕಷ್ಟದ ದಿನಗಳ ನಂತರ ಸುಖದ ದಿನಗಳು ಬರುವುದು ಅಷ್ಟೇ ಸತ್ಯ.
“ನನಗೆ ಬಂದಿರುವ ಕಷ್ಟಗಳು ಮತ್ತು ಅದನ್ನು ಎದುರಿಸಿದ ಸವಾಲುಗಳನ್ನು ನೋಡಿದರೆ, ನಾನು ಇಷ್ಟೊತ್ತಿಗೆ ನೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು! ಆದರೆ ನಾನು ಹಾಗೆ ಮಾಡಲಿಲ್ಲ. ಬಂದ ಪ್ರತಿ ಸಮಸ್ಯೆಯನ್ನೂ ಎದೆಗೊಟ್ಟು ಎದುರಿಸಿದೆ. ಅಂದು ಧೈರ್ಯಗೆಡದೆ ನಿಂತಿದ್ದಕ್ಕೆ, ಇವತ್ತು ಸಮಾಜದ ಮುಂದೆ ಗಟ್ಟಿಯಾಗಿ, ಹೆಮ್ಮೆಯಿಂದ ತಲೆ ಎತ್ತಿ ನಿಂತಿದ್ದೇನೆ.”
ಇದು ಕೇವಲ ಮಾತಲ್ಲ, ಕಷ್ಟದ ಸುಳಿಯಿಂದ ನರಳಿ ಮೇಲೆ ಬಂದ ಪ್ರತಿಯೊಬ್ಬ ಧೀಮಂತ ವ್ಯಕ್ತಿಯ ಆತ್ಮವಿಶ್ವಾಸದ ನುಡಿ. ನಮಗೂ ಇಂತಹ ಆಲೋಚನೆಗಳು ಬಂದಾಗ ನೆನಪಿರಲಿ, ಸಮಸ್ಯೆಗಳು ನಮ್ಮನ್ನು ನಾಶ ಮಾಡಲು ಬರುವುದಿಲ್ಲ, ನಮ್ಮೊಳಗಿನ ಅಪ್ರತಿಮ ಶಕ್ತಿಯನ್ನು ನಮಗೆ ಪರಿಚಯಿಸಲು ಬರುತ್ತವೆ. ಅಂದು ಎದುರಿಸಿ ನಿಂತಿದ್ದಕ್ಕೆ ಇವತ್ತು ಯಶಸ್ಸಿನ ಸವಿ ಉಣ್ಣಲು ಸಾಧ್ಯವಾಗಿದೆ. ನಾವು ಧೃತಿಗೆಟ್ಟಿದ್ದರೆ ಇಂದಿನ ಈ ಸುಂದರ ದಿನವನ್ನು ನೋಡಲು ಸಾಧ್ಯವಾಗುತ್ತಿತ್ತೇ?
ಆತ್ಮಹತ್ಯೆ ಪರಿಹಾರವಲ್ಲ, ಅದೊಂದು ತಪ್ಪಾದ ನಿರ್ಧಾರ
ನೋವು ಮತ್ತು ಒತ್ತಡ ತಡೆಯಲು ಸಾಧ್ಯವಾಗದ ಕ್ಷಣದಲ್ಲಿ, ಕ್ಷಣಿಕ ಆವೇಶಕ್ಕೆ ಒಳಗಾಗಿ ತೆಗೆದುಕೊಳ್ಳುವ ನಿರ್ಧಾರವೇ ಆತ್ಮಹತ್ಯೆ. ಇದರಿಂದ ನಿಮ್ಮ ಸಮಸ್ಯೆ ಕೊನೆಯಾಗಬಹುದು, ಆದರೆ ನಿಮ್ಮನ್ನು ನಂಬಿದ, ಪ್ರೀತಿಸಿದ ಹೆತ್ತವರು, ಸಂಗಾತಿ, ಮಕ್ಕಳು ಹಾಗೂ ಸ್ನೇಹಿತರ ಜೀವನ ಅಲ್ಲಿಂದ ನರಕವಾಗುತ್ತದೆ. ನಿಮ್ಮ ನಿರಪರಾಧಿ ಕುಟುಂಬಕ್ಕೆ ನೀವು ಜೀವಾವಧಿ ಶಿಕ್ಷೆ ನೀಡಿ ಹೊರಟುಹೋಗುವುದು ಯಾವ ನ್ಯಾಯ?
ನೆನಪಿಡಿ: ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಸಾಯುವುದು ಒಂದೇ ಬಾರಿ, ಆದರೆ ಅವರನ್ನು ನಂಬಿದ ಕುಟುಂಬ ಪ್ರತಿದಿನವೂ ಸಾಯುತ್ತಾ ಬದುಕಬೇಕಾಗುತ್ತದೆ.
ಧೈರ್ಯವಾಗಿ ಎದುರಿಸಲು ಏನು ಮಾಡಬೇಕು?
ಯಾವುದೇ ದೊಡ್ಡ ಸಮಸ್ಯೆಯಿದ್ದರೂ ಅದನ್ನು ನಿಮ್ಮ ಆಪ್ತರ ಬಳಿ, ತಂದೆ ತಾಯಿ, ಸಂಗಾತಿ ಅಥವಾ ಆತ್ಮೀಯ ಸ್ನೇಹಿತರ ಬಳಿ ಹಂಚಿಕೊಳ್ಳಿ. ಮಾತನಾಡುವುದರಿಂದ ಮನಸ್ಸಿನ ಭಾರ ಕಡಿಮೆಯಾಗುತ್ತದೆ.
ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಕೌನ್ಸಿಲಿಂಗ್ ಮತ್ತು ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ. ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ತಪ್ಪಲ್ಲ.
ತೀವ್ರ ಬೇಸರವಾದಾಗ ತಪ್ಪು ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಣ್ಣು ಮುಚ್ಚಿ ನಿಮ್ಮನ್ನು ನಂಬಿರುವ ಮುಗ್ಧ ಮುಖಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಆ ಒಂದು ಕ್ಷಣದ ಆವೇಶವನ್ನು ದಾಟಿದರೆ ಸಾಕು, ಮುಂದೆ ಸುಂದರ ಬದುಕಿರುತ್ತದೆ.
ಜೀವನದಲ್ಲಿ ಸೋಲು ಗೆಲುವು ಸಹಜ. ಸೋತ ತಕ್ಷಣವೇ ಎಲ್ಲವೂ ಮುಗಿಯಿತು ಅಂದುಕೊಳ್ಳುವುದು ತಪ್ಪು. ಬಿದ್ದವರು ಮತ್ತೆ ಎದ್ದು ನಿಲ್ಲಲೇಬೇಕು.
ಆತ್ಮಹತ್ಯೆಗಳನ್ನು ತಡೆಯುವಲ್ಲಿ ಕೇವಲ ವ್ಯಕ್ತಿಯಷ್ಟೇ ಅಲ್ಲ, ಇಡೀ ಸಮಾಜದ ಪಾತ್ರವೂ ಇದೆ. ನಮ್ಮ ಸುತ್ತಮುತ್ತ ಯಾರಾದರೂ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರೆ, ಒಂಟಿಯಾಗಿದ್ದರೆ ಅವರೊಂದಿಗೆ ಕುಳಿತು ಮಾತನಾಡಿ, ಧೈರ್ಯ ತುಂಬೋಣ. “ನಾನಿದ್ದೇನೆ ನಿನ್ನ ಜೊತೆ” ಎಂಬ ಸಣ್ಣ ಭರವಸೆಯ ಮಾತು ಕೂಡ ಒಂದು ಅಮೂಲ್ಯವಾದ ಜೀವವನ್ನು ಉಳಿಸಬಲ್ಲದು.
ಬದುಕು ಸುಂದರವಾಗಿದೆ, ಬದುಕಿ ತೋರಿಸಿ!
ಸಮಸ್ಯೆಗಳು ಸಮುದ್ರದ ಅಲೆಗಳಿದ್ದಂತೆ, ಬರುತ್ತವೆ ಮತ್ತು ಹೋಗುತ್ತವೆ. ಅಲೆಗಳಿಗೆ ಹೆದರಿ ಸಮುದ್ರಕ್ಕೆ ಧುಮುಕುವುದು ಮೂರ್ಖತನ. ಸವಾಲುಗಳನ್ನು ಎದುರಿಸಿ, ಈಜುವುದನ್ನು ಕರಗತ ಮಾಡಿಕೊಳ್ಳುವುದೇ ಬದುಕಿನ ಸಾರ್ಥಕತೆ. ಆತ್ಮಹತ್ಯೆ ಎಂಬುದು ಕೇವಲ ಹೇಡಿತನದ ಲಕ್ಷಣ. ಕಷ್ಟಗಳನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸುವುದೇ ನಿಜವಾದ ಶೌರ್ಯ.
ಬದುಕು ಒಮ್ಮೆ ಮಾತ್ರ ಸಿಗುವ ಅದ್ಭುತ ಕೊಡುಗೆ. ಅದನ್ನು ಅರ್ಧಕ್ಕೇ ಮುಗಿಸಬೇಡಿ. ಸವಾಲು ಏನೇ ಇರಲಿ, “ಬದುಕಿ ಗೆಲ್ಲುವುದೇ ಜೀವನ” ಎಂಬ ಛಲ ನಮ್ಮದಾಗಲಿ.
