ಕಳಸ ಲೈವ್ ವರದಿ
ಕಳಸ ಪಟ್ಟಣದ ದೇವಸ್ಥಾನದ ಪಕ್ಕದಿಂದ ಕೈಮರದವರೆಗೆ ಅರ್ಧಕ್ಕೆ ನಿಂತಿರುವ ರಸ್ತೆ ಅಗಲೀಕರಣ ಮತ್ತು ಸಿಮೆಂಟ್ ರಸ್ತೆ ಕಾಮಗಾರಿಯನ್ನು ತಕ್ಷಣವೇ ಮುಂದುವರಿಸಬೇಕು. ಇಲ್ಲದಿದ್ದರೆ ಮೇ 31ರ ಭಾನುವಾರ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕಳಸ ತಾಲ್ಲೂಕು ಸಮಿತಿ ಎಚ್ಚರಿಕೆ ನೀಡಿದೆ.
ಈ ಕುರಿತು ಸಿಪಿಐ ಕಾರ್ಯದರ್ಶಿ ಗೋಪಾಲ್ ಎಲ್. ಅವರು ಕಳಸ ಪೊಲೀಸ್ ಠಾಣೆಯ ಮಾನ್ಯ ಠಾಣಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳಸ ಪಟ್ಟಣದ ರಥಬೀದಿ ರಸ್ತೆಯ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಆರಂಭವಾಗಿತ್ತು. ಆದರೆ, ಪ್ರಸ್ತುತ ಈ ಕಾಮಗಾರಿಯು ದೇವಸ್ಥಾನದ ಬಳಿಯಿಂದ ಮುಂದುವರೆಯದೆ ಅರ್ಧಕ್ಕೆ ನಿಂತಿದೆ.
ಮು0ಗಾರು ಮಳೆ ಆರಂಭವಾಗುತ್ತಿರುವುದರಿAದ ರಥಬೀದಿ ರಸ್ತೆಯಲ್ಲಿ ಕೆಸರು ತುಂಬಿಕೊಳ್ಳುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ, ಕಳಸ ಪಟ್ಟಣಕ್ಕೆ ಮಳೆನೀರು ನುಗ್ಗಿ ರಸ್ತೆಯಲ್ಲೇ ಭದ್ರಾನದಿ ಹರಿಯುವಂತಾಗುತ್ತಿದೆ.
ಅಪೂರ್ಣಗೊ0ಡ ಚರಂಡಿ ವ್ಯವಸ್ಥೆಯಿಂದಾಗಿ ವಾಸದ ಮನೆಗಳ ಗಲೀಜು ನೀರು ರಥಬೀದಿ ರಸ್ತೆಯಲ್ಲೇ ಹರಿಯುತ್ತಿದ್ದು, ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮಳೆ ನಿಂತಾಗ ಧೂಳಿನ ಸಮಸ್ಯೆಯಿಂದ ವ್ಯಾಪಾರಸ್ಥರು, ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಸಿದ್ಧ ಕಳಸೇಶ್ವರ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯೇ ಈ ರೀತಿ ಅವ್ಯವಸ್ಥೆಯಿಂದ ಕೂಡಿರುವುದು ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಬೇಸರ ತರಿಸಿದೆ.
ಸಂಬ0ಧಪಟ್ಟ ಇಲಾಖೆಯು ಕೂಡಲೇ ಕೈಮರ ರಸ್ತೆಯವರೆಗೆ ಸಿಮೆಂಟ್ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗವನ್ನು ಸರಿಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಒಂದು ವೇಳೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದಿದ್ದರೆ, ದಿನಾಂಕ 31-05-2026ರ ಭಾನುವಾರ ಕಾಮಗಾರಿ ನಿಂತಿರುವ ಸ್ಥಳದಲ್ಲೇ ವಾಹನ ಚಾಲಕರು ಮತ್ತು ನಾಗರಿಕರೊಂದಿಗೆ ಸೇರಿ ‘ರಸ್ತೆ ತಡೆ ಚಳವಳಿ’ ನಡೆಸಲಾಗುವುದು. ಈ ವೇಳೆ ಉಂಟಾಗುವ ಯಾವುದೇ ತೊಂದರೆಗಳಿಗೆ ಇಲಾಖೆ ಮತ್ತು ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
