ಕಳಸ ಲೈವ್ ವರದಿ
ಮಲೆನಾಡಿನ ಭೂಮಿಯ ಮೇಲಿನ ಅತಿಯಾದ ಆಕರ್ಷಣೆ ಮತ್ತು ಜನರ ದುರಾಸೆಯನ್ನು ಬಂಡವಾಳ ಮಾಡಿಕೊಂಡು ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಹಾಗೂ ಲೂಟಿಯಿಂದಾಗಿ ಇಂದು ರಾಜ್ಯದಲ್ಲಿ ಕಳಸ ಮತ್ತು ಮೂಡಿಗೆರೆ ತಾಲ್ಲೂಕುಗಳ ಹೆಸರು ಮುಂಚೂಣಿಯಲ್ಲಿ ನಿಲ್ಲುವಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಮುಖಂಡ ಗೋಪಾಲ್ ಎನ್. ಶೆಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಳಸ ತಾಲ್ಲೂಕು ಮಂಡಳಿ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿ, ಒಮ್ಮತದ ಆಧಾರದ ಮೇಲೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಫಾರಂ ನಂಬರ್ 50 ಮತ್ತು 53ರ ಅಡಿಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿಯಲ್ಲಿ ನಿಜವಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಅರ್ಜಿಗಳನ್ನು ಮಾತ್ರ ಮರು ಪರಿಶೀಲನೆ ನಡೆಸಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ವಜಾಗೊಂಡಿರುವವರೆಲ್ಲರೂ ತಾವು ಫಲಾನುಭವಿಗಳು ಎಂದು ವಾದಿಸುವುದು ಸರಿಯಲ್ಲ. ಅಕ್ರಮವಾಗಿ ಸಲ್ಲಿಕೆಯಾಗಿರುವ ಅರ್ಜಿಗಳು ಯಾವಾಗಲೂ ಅಕ್ರಮವೇ, ಅವುಗಳು ಯಾವುದೇ ಕಾರಣಕ್ಕೂ ಸಕ್ರಮವಾಗಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಭೂ ಮಂಜೂರಾತಿ ಕಡತಗಳ ಬಗ್ಗೆ ಕಮ್ಯುನಿಸ್ಟ್ ಪಕ್ಷವು ಸಮಗ್ರ ಅಧ್ಯಯನ ನಡೆಸಿದೆ. ಈ ಕುರಿತು ಸರ್ಕಾರ, ತನಿಖಾ ಇಲಾಖೆಗಳು ಹಾಗೂ ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ದೂರು ಸಲ್ಲಿಸಲಾಗಿದೆ. ಪ್ರಸ್ತುತ ಈ ಹಗರಣದ ತನಿಖೆಯು ಭೂ ಕಬಳಿಕೆ ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ನಡೆಯುತ್ತಿದೆ. ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದಿರುವ ತನಿಖಾ ವರದಿಯನ್ನು ಸರ್ಕಾರ ಶೀಘ್ರವೇ ಸ್ವೀಕರಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ನಿಯಮಗಳ ಪ್ರಕಾರ ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆ ಭೂಮಿ ಮಾತ್ರ ಇರಬೇಕೆಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಅಕ್ರಮ-ಸಕ್ರಮದ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಹೊಂದಿರುವ ಮಾಲೀಕರು, ಒಂದೇ ಕುಟುಂಬದ ತಂದೆ, ಮಗ, ಮಗಳು, ಸೊಸೆ ಹಾಗೂ ಹೆಂಡತಿಯ ಹೆಸರಿನಲ್ಲಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಇದು ನೇರವಾದ ಭೂ ಕಾನೂನು ಉಲ್ಲಂಘನೆಯಾಗಿದೆ.
ಸ್ಥಳೀಯ ವಿಳಾಸವೇ ಇಲ್ಲದ, ಬೇರೆ ಬೇರೆ ಕಡೆ ನೆಲೆಸಿರುವ ರಾಜ್ಯ ಹಾಗೂ ಹೊರರಾಜ್ಯದ ಜನರಿಗೂ ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿ ವಂಚಿಸಿದ್ದಾರೆ. ನಿಯಮಾವಳಿಗಳನ್ನು ಪಾಲಿಸದ, ಅರ್ಜಿ ಹಾಗೂ ಅರ್ಜಿ ಸಂಖ್ಯೆಯೇ ಇಲ್ಲದ ಇಂತಹ ಅಕ್ರಮ ಮಂಜೂರಾತಿಗಳನ್ನು ಸಕ್ರಮಗೊಳಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಭೂ ನ್ಯಾಯ ಮಂಡಳಿ ಮತ್ತು ಭೂ ಕಾನೂನಿನ ಅಡಿಯಲ್ಲಿ ಸರ್ಕಾರಕ್ಕೆ ಸಾಧ್ಯವಿದೆ ಎಂದಾದರೆ, ಮೊದಲು ಇಲ್ಲಿನ ಎಸ್ಟೇಟ್ ಲೈನ್ಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಭೂ ರಹಿತ ಬಡವರನ್ನು ಗುರುತಿಸಿ ಅವರಿಗೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಇಂತಹ ಅಕ್ರಮ ಸರ್ಕಾರಿ ಭೂಮಿಗಳೆಲ್ಲವೂ ಸಕ್ರಮವಾದರೆ, ಮುಂದೆ ಭೂ ರಹಿತ ಬಡವರಿಗೆ ನಿವೇಶನ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ಭೂಮಿಯ ಲಭ್ಯತೆಯೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಅಕ್ರಮಗಳ ವಿರುದ್ಧ ಕಾನೂನು ಹೋರಾಟವನ್ನು ಮುಂದುವರೆಸಲು ತಾಲ್ಲೂಕು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಮುಖ ಸಭೆಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಣ್ ಆಚಾರ್, ಗೋಪಾಲ್ ಹಡ್ಲು, ಚಂದ್ರೇ ಗೌಡ, ರಾಜು, ಸಾವಿತ್ರಿ, ಕೃಷ್ಣ, ರಜಾಕ್, ಅಣ್ಣಪ್ಪ ಹಾಗೂ ಗಜೇಂದ್ರ ಉಪಸ್ಥಿತರಿದ್ದರು.
