ಕಳಸ ಲೈವ್ ವರದಿ
ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಕಳಸ ಮತ್ತು ಕರ್ನಾಟಕ ಲೇಖಕೀಯರ ಸಂಘ ಕಳಸ ಇವರ ಸಂಯುಕ್ತಾಶ್ರಯದಲ್ಲಿ ಮುಂಗಾರು ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮಿ ಬಿ. ಜೋಷಿ ಅವರು, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ, ಆದರೆ ಅದನ್ನು ಪ್ರದರ್ಶಿಸಲು ಸೂಕ್ತ ಅವಕಾಶಗಳು ಸಿಗುವುದಿಲ್ಲ. ಇಂತಹ ವೇದಿಕೆಗಳು ಲಭ್ಯವಾದಾಗ ಮಾತ್ರ ಮಹಿಳೆಯರು ತಮ್ಮ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ನೂರಾರು ಜಂಜಾಟ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಮಾನಸಿಕ ಅಸ್ತಿತ್ವ ಮತ್ತು ನೆಮ್ಮದಿಯನ್ನು ಉಳಿಸಿಕೊಳ್ಳಲು ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿವೆ. ಮುಂಗಾರು ಆರಂಭದ ಈ ಶುಭ ದಿನಗಳಲ್ಲಿ ಇಂತಹದೊAದು ಅಪೂರ್ವ ಸಾಹಿತ್ಯ ಸಂಜೆಯನ್ನು ನಡೆಸಿ, ಮಹಿಳೆಯರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಮತ್ತು ಸಂತೋಷದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಕೆ.ಕೆ. ಬಾಲಕೃಷ್ಣ ಭಟ್ ಮಾತನಾಡಿ, ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜಿಸುವುದು ದೊಡ್ಡ ವಿಷಯವಲ್ಲ. ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಒಟ್ಟು ಸೇರಿಸಿ ಕಾರ್ಯಕ್ರಮ ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ ಪ್ರೇಮಿಗಳನ್ನು ಒಗ್ಗೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಸಾಹಿತ್ಯ ಲೋಕದಲ್ಲಿ ಕಳಸ ತಾಲ್ಲೂಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಇಲ್ಲಿಗೊಂದು ಸುಸಜ್ಜಿತ ಕನ್ನಡ ಭವನ ದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ಮುಂಗಾರು ಮಳೆ ಕುರಿತಾದ ವಿಶೇಷ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೃಷ್ಣವೇಣಿ, ದ್ವಿತೀಯ ಬಹುಮಾನ ನಗೀನಾ ಖಾದರ್, ತೃತೀಯ ಬಹುಮಾನ ಸುಚಿತ್ರಾ ಉದಯ್ ಪಡೆದುಕೊಂಡರು.
ಸಾಹಿತ್ಯಿಕ ಸಂಜೆಯ ವೇದಿಕೆಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಜಾನಕಿ ಸುಂದರೇಶ್, ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಕರ್ನಾಟಕ ಲೇಖಕೀಯರ ಸಂಘದ ಉಪಾಧ್ಯಕ್ಷೆ ಚಂಪಕಾ ರಾಘವೇಂದ್ರ, ಕಸಾಪ ಜಿಲ್ಲಾ ಸಂಚಾಲಕ ಹೆಚ್.ಆರ್. ಪಾಂಡುರAಗ, ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ ಹಾಗೂ ಪ್ರಮುಖರಾದ ಅಜಿತ್ ಕುಮಾರ್, ರಜಿತ್ ಕೆಳಗೂರು, ಕೃಷ್ಣಮೂರ್ತಿ, ಶೇಖರ ಶೆಟ್ಟಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
