
ಕಳಸ ಲೈವ್ ವರದಿ
ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಹದವಾದ ಮಳೆ ಮುಂದುವರೆದಿದ್ದು, ತಾಲ್ಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡು ಸಾರ್ವಜನಿಕರು ಕತ್ತಲಲ್ಲಿ ದಿನದೂಡುವಂತಾಗಿದೆ. ಕಳಸ ಸಮೀಪದ ಗುಮ್ಮನ್ಖಾನ್ ಹಾಗೂ ಬಾಳೆಖಾನ್ ಕರೆಮನೆ ಎಸ್ಟೇಟ್ ವ್ಯಾಪ್ತಿಯಲ್ಲಿ ವಿದ್ಯುತ್ ಮೂಲಸೌಕರ್ಯಗಳು ಧರೆಗುರುಳಿದಿದೆ.
ಶುಕ್ರವಾರ ಕಳಸ ಸಮೀಪದ ಗುಮ್ಮನ್ಖಾನ್ ಎಂಬಲ್ಲಿ ಗಾಳಿಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಂಪೂರ್ಣವಾಗಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಅನಾಹುತ ಸಂಭವಿಸಿಲ್ಲ. ಆದರೆ, ಟ್ರಾನ್ಸ್ಫಾರ್ಮರ್ ಬಿದ್ದ ಪರಿಣಾಮ ಇಡೀ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇತ್ತ ಬಾಳೆಖಾನ್ ಕರೆಮನೆ ಎಸ್ಟೇಟ್ ಸಮೀಪ ಗುರುವಾರ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ, ಕಂಬವು ಮುರಿದು ಬಿದ್ದಿದೆ. ಇದರಿಂದಾಗಿ ಈ ಭಾಗದಲ್ಲೂ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಈ ಸಮಸ್ಯೆ ಬಗ್ಗೆ ಮೆಸ್ಕಾಂ ಕಚೇರಿಗೆ ತಿಳಿಸಿದರೆ, ಪ್ರಸ್ತುತ ಕಾಂಟ್ರಾಕ್ಟರ್ ಲಭ್ಯವಿಲ್ಲ, ಕೆಲಸ ಮುಗಿಯಲು ಕನಿಷ್ಠ ಮೂರು ದಿನಗಳಾಗುತ್ತವೆ ಎಂದು ಉತ್ತರ ನೀಡುತ್ತಿದ್ದಾರೆ. ಇನ್ನು ಲೈನ್ಮ್ಯಾನ್ಗಳಿಗೆ ಕರೆ ಮಾಡಿದರೆ, ಕೆಲಸ ಮಾಡಲು ನಮಗೆ ಜನರನ್ನು ಕೊಡಿ, ನಾವು ಸರಿ ಮಾಡಿಕೊಡುತ್ತೇವೆ ಎಂದು ಸಾರ್ವಜನಿಕರ ಮೇಲೆಯೇ ಜವಾಬ್ದಾರಿ ತಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಾರಿ ತಾಲ್ಲೂಕಿನಲ್ಲಿ ಅಷ್ಟೇನೂ ಭಾರಿ ಮಳೆಯಾಗಲಿ ಅಥವಾ ಭೀಕರ ಗಾಳಿಯಾಗಲಿ ಸಂಭವಿಸಿಲ್ಲ. ಪರಿಸ್ಥಿತಿ ಹೀಗಿದ್ದರೂ, ಸಣ್ಣಪುಟ್ಟ ಗಾಳಿ-ಮಳೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಲೈನ್ ಸರಿಪಡಿಸಿಕೊಡಿ ಎಂದು ಕೇಳಿದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ರೀತಿಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
