
ಕಳಸ ಲೈವ್ ವರದಿ
ಕಳಸ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 2026–27ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭವು ಶನಿವಾರ ಶಾಲಾ ಸಭಾಂಗಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.
ಉಧ್ಯಮಿ ಕೆ.ಕೆ. ಬಾಲಕೃಷ್ಣ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ಸ್ವಚ್ಛತೆಯ ಮಹತ್ವ ಹಾಗೂ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರಾದ ಡಾ. ಮಹಮ್ಮದ್ ರಫೀಕ್ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ನೂತನ ಪದಾಧಿಕಾರಿಗಳು ಶಾಲೆಯ ಏಳಿಗೆಗಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಶಾಲೆಯ ಉಪಪ್ರಾಂಶುಪಾಲರಾದ ಸುರೇಶ್ ನೂತನ ಸಭಾಧ್ಯಕ್ಷೆ ಹಾಗೂ ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳಿಗೆ ಅಧಿಕೃತವಾಗಿ ಪ್ರಮಾಣವಚನ ಬೋಧಿಸಿದರು. ನಂತರ ಸಭಾಧ್ಯಕ್ಷೆ ಸಾಹಿತ್ಯ, ಶಾಲಾ ನಾಯಕ ರಾಯಲ್ ಸುವಾರಿಸ್, ಶಾಲಾ ನಾಯಕಿ ಗೀತಾ ಹಾಗೂ ವಿದ್ಯಾರ್ಥಿ ಸಚಿವ ಸಂಪುಟದ ಎಲ್ಲಾ ಸಚಿವರು ಮತ್ತು ಸದಸ್ಯರಿಗೆ ಪ್ರಮಾಣಪತ್ರ ಹಾಗೂ ಬ್ಯಾಡ್ಜ್ಗಳನ್ನು ವಿತರಿಸಿದರು.
ಸಭಾಧ್ಯಕ್ಷೆ ಸಾಹಿತ್ಯ ಅವರು ಶಾಲಾ ನಾಯಕ, ನಾಯಕಿ ಸೇರಿದಂತೆ ವಿದ್ಯಾರ್ಥಿ ಸಂಸತ್ತಿನ ಎಲ್ಲಾ ಸಚಿವರು ಮತ್ತು ಸದಸ್ಯರಿಗೆ ಜವಾಬ್ದಾರಿಯ ಪ್ರಮಾಣವಚನ ಬೋಧಿಸಿದರು. ನೂತನ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿ, ಶಿಸ್ತು, ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಹಪಾಠಿಗಳ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರಾದ ಗಣೇಶ್ ಭಟ್, ಸುರೇಶ್, ಅನಿಲ್ ಭಂಡಾರಿ, ಅರುಣ್ ಸೇರಿದಂತೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಕನ್ನಡ ಭಾಷಾ ಶಿಕ್ಷಕಿ ರಶ್ಮಿ ಬಿ.ಎಸ್. ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಸೌಂದರ್ಯ ವಂದನಾರ್ಪಣೆ ಮಾಡಿದರು.
