
ಕಳಸ ಲೈವ್ ವರದಿ
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಕೊಂಡಿಯಾಗಿರುವ ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯ ಮೂರು ಪ್ರಮುಖ ಸೇತುವೆಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಭೀತಿ ಎದುರಾಗಿದೆ. ಸಂಬ0ಧಪಟ್ಟ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ಸೇತುವೆಗಳು ಸಾಕ್ಷಿಯಾಗಿದ್ದು, ಪ್ರಯಾಣಿಕರು ಪ್ರತಿದಿನ ಜೀವ ಕೈಯಲ್ಲಿಡಿದು ಸಂಚರಿಸುವAತಾಗಿದೆ.
ಪ್ರಸ್ತುತ ಈ ಮಾರ್ಗದಲ್ಲಿರುವ ಮೂರು ಸೇತುವೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸೇತುವೆಯ ಒಂದು ಬದಿಯಲ್ಲಿ ರಸ್ತೆ ಮತ್ತು ಸೇತುವೆಯ ಜಾಯಿಂಟ್ ಬಿಟ್ಟುಕೊಂಡು ಬೇರ್ಪಟ್ಟು ನಿಂತಿದೆ. ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದ್ದ ಕಬ್ಬಿಣದ ರಾಡುಗಳು ಸಂಪೂರ್ಣವಾಗಿ ಮೇಲೆದ್ದು ಬಂದಿದ್ದು, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಈ ಸೇತುವೆಗಳ ಮೇಲೆ ನಿಂತಾಗ, ಯಾವುದಾದರೂ ಒಂದು ಸಣ್ಣ ವಾಹನ ಹಾದುಹೋದರೂ ಇಡೀ ಸೇತುವೆಯೇ ಜೋರಾಗಿ ಅಲುಗಾಡುವ ಅನುಭವವಾಗುತ್ತಿದೆ.
ರಸ್ತೆ ಮತ್ತು ಸೇತುವೆ ಕೂಡುವ ಜಾಗದಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಮಳೆಗಾಲದಲ್ಲಿ ಈ ಹೊಂಡಗಳಲ್ಲಿ ನೀರು ನಿಂತು, ಆ ನೀರು ಕೆಳಗೆ ಕೊರೆದು ಹೋಗುತ್ತಿರುವುದರಿಂದ ಸೇತುವೆಯ ಪಿಲ್ಲರ್ ಹಾಗೂ ತಳಪಾಯದ ಭಾಗಗಳು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿವೆ.ಅಲ್ಲದೆ ರಸ್ತೆಯೂ ಕೊರೆದುಕೊಂಡು ಹೋಗುತ್ತಿದೆ.

ಇದೇ ರಸ್ತೆಯಲ್ಲಿ ಕಳೆದ 2011ರಲ್ಲಿ ಸೇತುವೆಯೊಂದು ಕುಸಿದು ಬಿದ್ದು, ತಿಂಗಳುಗಳ ಕಾಲ ಕರಾವಳಿ ಮತ್ತು ಮಲೆನಾಡಿನ ನಡುವಿನ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದ್ದ ಉದಾಹರಣೆ ಕಣ್ಣಮುಂದಿದೆ. ಅಂದು ಸಾರ್ವಜನಿಕರು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಮತ್ತೆ ಅಂತಹದ್ದೇ ದುರಂತ ಮರುಕಳಿಸುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಮಳೆಗಾಲದ ಪೂರ್ವ ಸಿದ್ಧತೆ ಮತ್ತು ರಸ್ತೆ, ಸೇತುವೆಗಳ ಸುರಕ್ಷತೆಗಾಗಿ ಭಾರತೀಯ ರಸ್ತೆ ಕಾಂಗ್ರೆಸ್ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರತ್ಯೇಕ ಹಾಗೂ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡಿವೆ.
ಮುಂಗಾರು ಆರಂಭಕ್ಕೆ ಕನಿಷ್ಠ 2 ತಿಂಗಳು ಮುಂಚಿತವಾಗಿ ಎಲ್ಲಾ ಸೇತುವೆಗಳ ಪ್ರೀ-ಮಾನ್ಸೂನ್ ಇನ್ಸ್ಪೆಕ್ಷನ್ಮಾಡಬೇಕು. ಸೇತುವೆಯ ಬೇರಿಂಗ್ಗಳು, ಎಕ್ಸ್ಪಾನ್ಷನ್ ಜಾಯಿಂಟ್ಗಳು ರಸ್ತೆ ಮತ್ತು ಸೇತುವೆ ಕೂಡುವ ಜಾಗ ಮತ್ತು ರೇಲಿಂಗ್ಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ದುರಸ್ತಿ ಮಾಡಬೇಕು.

ಮಳೆಗಾಲದಲ್ಲಿ ರಸ್ತೆ ಕುಸಿಯದಂತೆ ತಡೆಯಲು ರಸ್ತೆಯ ಮೇಲ್ಮೈಯಲ್ಲಿರುವ ಹೊಂಡಗಳನ್ನು ಮತ್ತು ಬಿರುಕುಗಳನ್ನು ಜಲನಿರೋಧಕ ಮಿಶ್ರಣಗಳಿಂದ ಮುಚ್ಚಬೇಕು. ರಸ್ತೆಯ ಮೇಲಿನ ನೀರು 10 ರಿಂದ 15 ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲದಂತೆ ಚರಂಡಿಗಳ ಇಳಿಜಾರು ಇರಬೇಕು ಮತ್ತು ಹೂಳು ಮುಕ್ತವಾಗಿರಬೇಕು.ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಪ್ರಧಾನ ಕಚೇರಿಯಿಂದ ಎಲ್ಲಾ ಜಿಲ್ಲಾ ಇಂಜಿನಿಯರ್ಗಳಿಗೆ ಹೊರಡಿಸಿದ ಅಧಿಕೃತ ಸುತ್ತೋಲೆಯಂತೆ
ಮೇ 15 ಅಥವಾ ಮೇ 31ರ ಒಳಗಾಗಿ ರಸ್ತೆ ಬದಿಯ ಹೂಳೆತ್ತುವಿಕೆ ಮತ್ತು ಪ್ಯಾಚ್ ವರ್ಕ್ ಮುಗಿಯಬೇಕು.ರಸ್ತೆ ಬದಿಯ ಜಂಗಲ್ ಕಟಿಂಗ್ ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕತ್ತರಿಸಬೇಕು. ಈ ಹಿಂದೆ ಕುಸಿದ ಇತಿಹಾಸವಿರುವ ರಸ್ತೆ ಅಥವಾ ಸೇತುವೆಗಳನ್ನು ‘ಅತ್ಯಂತ ಸೂಕ್ಷ್ಮ ವಲಯ’ ಎಂದು ಗುರುತಿಸಿ, ಅಲ್ಲಿ ಹೆಚ್ಚುವರಿ ನಿಗಾ ಇಡಬೇಕು ಆದರೆ ಎಲ್ಲವನ್ನು ಕುದುರೆಮುಖ ರಸ್ತೆಯ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳು ನಿಯಮಾವಳಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಈ ರಸ್ತೆಯು ಕೇವಲ ಒಂದು ಪ್ರವಾಸಿ ಮಾರ್ಗವಲ್ಲ, ಬದಲಿಗೆ ಸಾವಿರಾರು ಜನರ ದೈನಂದಿನ ಬದುಕಿನ ಆಸರೆಯಾಗಿದೆ. ಈ ರಸ್ತೆಯು ಅತ್ಯಂತ ಸೂಕ್ಷ್ಮ ಪರಿಸರ ವಲಯವಾದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುತ್ತದೆ.ಕಳಸ ತಾಲ್ಲೂಕಿನ ಜನತೆ ತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಕರಾವಳಿ ಭಾಗವನ್ನೇ ನೆಚ್ಚಿಕೊಂಡಿದ್ದಾರೆ.ಪ್ರತಿದಿನ ಸಾವಿರಾರು ಪ್ರವಾಸಿಗರು, ರೋಗಿಗಳು, ವಿದ್ಯಾರ್ಥಿಗಳು ಹಾಗೂ ಸರಕು ಸಾಗಣೆ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.
ಒAದು ವೇಳೆ ಈ ಮೂರು ಸೇತುವೆಗಳಲ್ಲಿ ಯಾವುದಾದರೂ ಒಂದು ಕುಸಿದರೂ ಕಳಸ ಸೇರಿದಂತೆ ಇಡೀ ಮಲೆನಾಡು ಭಾಗ ಕರಾವಳಿಯಿಂದ ಸಂಪೂರ್ಣ ಸಂಪರ್ಕ ಕಳೆದುಕೊಳ್ಳಲಿದೆ.
ದುರಂತ ಸಂಭವಿಸಿದ ಮೇಲೆ ಕಣ್ಣೀರು ಸುರಿಸುವ ಬದಲು, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ಯುದ್ಧೋಪಾದಿಯಲ್ಲಿ ಈ ಮೂರು ಸೇತುವೆಗಳ ದುರಸ್ತಿ ಕಾರ್ಯ ಕೈಗೊಂಡು, ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ತೀವ್ರವಾಗಿ ಆಗ್ರಹಿಸಿದ್ದಾರೆ.
