
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದಲ್ಲಿ ಭಾನುವಾರ ಸುರಿದ ನಿರಂತರ ಮಳೆಯ ಆರ್ಭಟಕ್ಕೆ ಭೀಕರ ಭೂಕುಸಿತ ಸಂಭವಿಸಿದ್ದು, ಬೆಳ್ಳ ಗ್ರಾಮದ ಬಡ ಕೃಷಿಕ ಕೃಷ್ಣಪ್ಪ ಎಂಬುವವರಿಗೆ ಸೇರಿದ ಎಕರೆಗೂ ಹೆಚ್ಚು ವಿಸ್ತೀರ್ಣದ ಕಾಫಿ ಹಾಗೂ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಭಾನುವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಕೃಷ್ಣಪ್ಪ ಹಾಗೂ ಅವರ ಪತ್ನಿ ಸುಶೀಲಾ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೆ ಕಲ್ಲುಗಳು ಉರುಳಿಬೀಳಲು ಆರಂಭಿಸಿವೆ. ಅಪಾಯದ ಸುಳಿವು ಅರಿತ ದಂಪತಿ ತಕ್ಷಣವೇ ತೋಟದಿಂದ ದೂರ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅವರು ಓಡಿದ ಕೆಲವೇ ಕ್ಷಣಗಳಲ್ಲಿ ಸುಮಾರು 1 ಎಕರೆಯಷ್ಟು ಫಲವತ್ತಾದ ತೋಟ ಕಣ್ಣೆದುರಲ್ಲೇ ಜರಿದುಬಿದ್ದಿದೆ.

ಕೃಷ್ಣಪ್ಪ ಅವರ ಕುಟುಂಬಕ್ಕೆ ಒಟ್ಟು 2 ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ ಅರ್ಧದಷ್ಟು ಭೂಮಿ ಮಣ್ಣುಪಾಲಾಗಿದೆ. 40 ವರ್ಷಗಳಿಂದ ಜತನದಿಂದ ಬೆಳೆಸಿದ ನೂರಾರು ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿ ಗಿಡಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ. ಸದ್ಯ ತೋಟದಲ್ಲಿ ಉತ್ತಮ ಫಸಲು ಇದ್ದು, ಕಯ್ಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಭೂಕುಸಿತದಿಂದಾಗಿ ಕುಡಿಯುವ ನೀರಿನ ಮೂಲವೂ ಹಾಳಾಗಿದ್ದು, ಕುಡಿಯಲು ನೀರೂ ಸಿಗದ ಸ್ಥಿತಿ ನಿರ್ಮಾಣವಾಗಿದೆ.
“ನಾವು 40 ವರ್ಷಗಳಿಂದ ಹಗಲಿರುಳು ಕಷ್ಟಪಟ್ಟು ಸಾಕಿದ ಕಾಫಿ, ಅಡಿಕೆ ಗಿಡಗಳೆಲ್ಲಾ ಕಣ್ಣೆದುರಲ್ಲೇ ಮಣ್ಣಿನಲ್ಲಿ ಹೂತುಹೋಗಿವೆ. ಕುಡಿಯಲು ನೀರೂ ಸಿಗುತ್ತಿಲ್ಲ, ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ” ಎಂದು ಕೃಷಿಕ ಕೃಷ್ಣಪ್ಪ ದುಃಖ ತೋಡಿಕೊಂಡಿದ್ದಾರೆ.
ಅವರ ಪತ್ನಿ ಸುಶೀಲಾ ಮಾತನಾಡಿ, “ಜರಿದುಬಿದ್ದ ತೋಟದಲ್ಲಿ ಉತ್ತಮ ಬೆಳೆ ಇತ್ತು. ಘಟನಾ ಸ್ಥಳದಲ್ಲಿ ಈಗಲೂ ಮಣ್ಣು ಜರಿಯುತ್ತಿದೆ. ನಿನ್ನೆ ನಮ್ಮ ಪ್ರಾಣ ಉಳಿ ಯಿತಲ್ಲ ಅದೇ ದೊಡ್ಡ ಅದೃಷ್ಟ. ಸರ್ಕಾರ ತಕ್ಷಣ ನಮಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಕಣ್ಣೀರು ಹಾಕಿದ್ದಾರೆ.
ಅತ್ಯಂತ ಬಡತನದಲ್ಲಿದ್ದ ಕೃಷ್ಣಪ್ಪ ಅವರ ಕುಟುಂಬ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿತ್ತು. ಈಗ ಇದ್ದ ಅತ್ಯಲ್ಪ ಜಮೀನು ಕೂಡ ನಾಶವಾಗಿರುವುದರಿಂದ ಕುಟುಂಬ ಕಂಗಾಲಾಗಿದೆ. ಬಾಧಿತ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತವಾದ ನಷ್ಟ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ
