ಕಳಸ ಲೈವ್ ವರದಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಕಳಸ ಇವುಗಳ ಸಂಯುಕ್ತಾಶ್ರಯದಲ್ಲಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಮತ್ತು 2ನೇ ಕಳಸ ಹೋಬಳಿ ಸಾಹಿತ್ಯ ಸಮ್ಮೇಳನ ದತ್ತಿ ಹಾಗೂ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಕಾರ್ಯಕ್ರಮವು ಕಳಸದ ಕೆಪಿಎಸ್ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸತೀಶ್ ಚಂದ್ರ ಅವರು ಮಾತನಾಡಿ ತಮ್ಮ ಹಿರಿಯರ ಅಥವಾ ತಮಗೆ ಉಪಕಾರ ಮಾಡಿದವರ ನೆನಪಿಗೆ, ಇಲ್ಲವೇ ನಾಡು-ನುಡಿಯ ಸೇವೆಗಾಗಿ ಪರಿಷತ್ತಿನ ಸದಸ್ಯರು ಹಾಗೂ ಸಾರ್ವಜನಿಕರು ನೀಡುವ ಶಾಶ್ವತ ಠೇವಣಿಯಿಂದ ಪ್ರತಿವರ್ಷ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಯೋಜನೆ ಮೊದಲು ಜಾರಿಗೆ ಬಂದದ್ದು 1935ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ. ಎಂ. ಶ್ರೀಕಂಠಯ್ಯ ಅವರಿಂದ. 23-7-1935ರಂದು ಗಮಕ ಕಲಾಭಿವೃದ್ಧಿಗಾಗಿ ಬಿ.ಎಂ.ಶ್ರೀ ಅವರು 1000 ರೂಪಾಯಿಗಳನ್ನು ಪರಿಷತ್ತಿನ ಮೂಲನಿಧಿಗೆ ನೀಡುವ ಮೂಲಕ ಮೊದಲ ದತ್ತಿ ದಾನಿಯಾದರು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಮಾತನಾಡಿ, ಕನ್ನಡವು ಜಗತ್ತಿನಲ್ಲಿಯೇ ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಭಾಷೆಯಾಗಿದೆ. ನಾವು ಆಡುವ ಮಾತನ್ನೇ ಬರಹದಲ್ಲಿ ಬಳಸುವ ಏಕೈಕ ಹೆಗ್ಗಳಿಕೆ ಕನ್ನಡಕ್ಕಿದೆ. ನಿರಂತರ ಬಳಕೆಯಿಂದ ಮಾತ್ರ ಭಾಷೆಯನ್ನು ಉಳಿಸಲು ಸಾಧ್ಯ, ಅಲ್ಲದೆ, ಮುಂದಿನ ದಿನಗಳಲ್ಲಿ ಹೊಸ ಲೇಖಕರು ಮತ್ತು ಕವಯಿತ್ರಿಯರನ್ನು ಪ್ರೋತ್ಸಾಹಿಸಲು ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಕಾವ್ಯ ರಚನೆ ಹಾಗೂ ಕಥಾ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಧರ್ಮದ ಉತ್ಥಾನದಲ್ಲಿ ಸಾಹಿತ್ಯದ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪಾಂಡುರAಗ ಅವರು, ವೇದಗಳ ಕಾಲದಿಂದ ಶ್ರುತಿ ಮುಖಾಂತರವಾಗಿ ಬೆಳೆದುಬಂದ ಸಾಹಿತ್ಯವು ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಉಗಾಭೋಗ ಹಾಗೂ ಶರೀಫರ ಗೀತೆಗಳ ಮೂಲಕ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮಾರ್ಪಾಡು ಹೊಂದುತ್ತಾ ಬಂದಿದೆ. ಈ ದೃಢವಾದ ಹಿನ್ನೆಲೆಯೇ ಕನ್ನಡ ಸಾಹಿತ್ಯ ಗಟ್ಟಿಯಾಗಿ ನಿಲ್ಲಲು ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ರಫೀಕ್, ಕಸಾಪ ಜಿಲ್ಲಾ ಸಂಚಾಲಕಿ ಶ್ರೀಮತಿ ಮುಮ್ತಾಜ್ ಬೇಗಂ, ಕಸಾಪ ಎನ್ಆರ್ಪುರ ಅಧ್ಯಕ್ಷ ಎಂ. ಹೆಚ್ ಪೂರ್ಣೇಶ್, ಸಾಹಿತಿ ಶ್ರೀಮತಿ ಚಂದ್ರ ಕಲಾ ಕೊಪ್ಪ , ಕನ್ನಡ ಜಾನಪದ ಅಧ್ಯಕ್ಷ ಅಜಿತ್ ಪ್ರಸಾದ್, ಸಾಹಿತಿ, ಪ್ರೇಮ್ ಕುಮಾರ್, ಕಿರಣ್ ಶೆಟ್ಟಿ, ಸುಮನ ಜಯರಾಜ್, ಸುಜಯಾ ಸದಾನಂದ, ನಗೀನಾ, ಸುಚಿತಾ ಇತರರು ಇದ್ದರು.
