
ಕಳಸ ಲೈವ್ ವರದಿ
ಪ್ರವಾಸಿಗರ ನಿರ್ಲಕ್ಷ್ಯದಿಂದ ಕಸದ ರಾಶಿಯಾಗಿ ಮಾರ್ಪಟ್ಟಿದ್ದ ಮೈದಾಡಿ ಪ್ರವಾಸಿ ತಾಣದಲ್ಲಿ ಕಳಸ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸದಸ್ಯರು ಸ್ವಚ್ಛತಾ ಅಭಿಯಾನ ನಡೆಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಜೊತೆಗೆ, ಪ್ರವಾಸಿ ತಾಣದ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಶಾಶ್ವತ ಪರಿಹಾರ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.
ಮೈದಾಡಿಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದ ಕಳಸ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸದಸ್ಯ ಸಂದೇಶ್, ಕಳೆದ ಕೆಲವು ದಿನಗಳಿಂದ ಪ್ರವಾಸಿಗರು ಎಸೆಯುತ್ತಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳಿಂದ ಪ್ರದೇಶ ಸಂಪೂರ್ಣ ಗಲೀಜಾಗಿತ್ತು. ಸ್ಥಳೀಯ ಹೋಂಸ್ಟೇ ಮಾಲೀಕರ ಸಹಕಾರದೊಂದಿಗೆ ಎರಡು ದಿನಗಳ ಕಾಲ ಶ್ರಮವಹಿಸಿ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ.
ಪ್ರವಾಸಿಗರು ಆಹಾರ ಸಾಮಗ್ರಿಗಳನ್ನು ತಂದು ಸೇವಿಸಿ ಕಸವನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಘಟನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸೂಕ್ತ ಯೋಜನೆ ರೂಪಿಸಬೇಕು. ಪಂಚಾಯಿತಿಯಿAದ ಕಸದ ತೊಟ್ಟಿಗಳನ್ನು ಅಳವಡಿಸಿದ್ದರೂ ಅವುಗಳನ್ನು ನಿಯಮಿತವಾಗಿ ತೆರವುಗೊಳಿಸುವ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೈದಾಡಿಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಬೇಕು. ಪ್ರವೇಶ ದ್ವಾರದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಒಳಗೆ ತರದಂತೆ ತಪಾಸಣೆ ನಡೆಸಿದರೆ ಸಮಸ್ಯೆಯ ಬಹುಪಾಲು ಪರಿಹಾರವಾಗಲಿದೆ. ಜೊತೆಗೆ ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಬೆಳೆಸುವುದು ಅಗತ್ಯ ಎಂದು ಸಂದೇಶ್ ಅಭಿಪ್ರಾಯಪಟ್ಟರು.

ಸಮಿತಿಯ ಮತ್ತೋರ್ವ ಸದಸ್ಯ ಸಂಪತ್ ಮಾತನಾಡಿ, ಕೇವಲ ಸ್ವಚ್ಛತಾ ಕಾರ್ಯ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಗತ್ಯವಿರುವ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸುವುದರ ಜೊತೆಗೆ ಕಸ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿ ವ್ಯವಸ್ಥೆಯನ್ನು ಸರ್ಕಾರ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಘಟನೆಗಳು ಜಂಟಿಯಾಗಿ ರೂಪಿಸಬೇಕು ಎಂದು ಹೇಳಿದರು. ಈ ಕುರಿತು ಸಂಬAಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಮೈದಾಡಿಯಲ್ಲಿ ವಾಹನಗಳ ಪ್ರವೇಶದಿಂದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಮುಖ್ಯ ರಸ್ತೆಯ ಸಮೀಪ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ತ್ಯಾಜ್ಯ ನಿರ್ವಹಣೆಗೆ ಅಗತ್ಯ ಯಂತ್ರೋಪಕರಣಗಳು ಹಾಗೂ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಅವರು ಹೇಳಿದರು.

ಸಮಿತಿಯ ಸದಸ್ಯ ಚಂದ್ರಮೋಹನ್ ಮಾತನಾಡಿ, ವಾಹನಗಳ ಪ್ರವೇಶದಿಂದ ಕೇವಲ ಕಸದ ಸಮಸ್ಯೆಯಷ್ಟೇ ಅಲ್ಲದೆ ಶಬ್ದ ಮಾಲಿನ್ಯವೂ ಹೆಚ್ಚುತ್ತಿದೆ. ಸುಮಾರು 15ರಿಂದ 18 ವರ್ಷಗಳ ಹಿಂದೆ ಮೈದಾಡಿಯಲ್ಲಿ ವಾಹನಗಳ ಸಂಚಾರ ಇರಲಿಲ್ಲ. ಕೆಲವೇ ಜೀಪ್ಗಳು ಮಾತ್ರ ಬರುತ್ತಿದ್ದ ಕಾರಣ ಪ್ರದೇಶ ಸ್ವಚ್ಛ ಹಾಗೂ ಶಾಂತವಾಗಿತ್ತು. ಈಗ ವಾಹನಗಳೊಂದಿಗೆ ಜೋರಾದ ಸಂಗೀತ, ಗದ್ದಲ ಹಾಗೂ ಅಸಭ್ಯ ವರ್ತನೆಗಳು ಹೆಚ್ಚಾಗಿದ್ದು, ಪ್ರಕೃತಿ ಸೌಂದರ್ಯ
ವೀಕ್ಷಿಸಲು ಬರುವ ಕುಟುಂಬಗಳು ಹಾಗೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ.ಕಳಸವು ರಾಜ್ಯದ ಪ್ರಮುಖ ಪ್ರಕೃತಿ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದರೆ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಇದರಿಂದ ಸ್ಥಳೀಯ ವ್ಯಾಪಾರ, ಹೋಟೆಲ್ ಮತ್ತು ಪ್ರವಾಸೋದ್ಯಮ ಆಧಾರಿತ ಉದ್ಯಮಗಳಿಗೂ ಉತ್ತೇಜನ ಸಿಗಲಿದೆ. ಕೊಡಚಾದ್ರಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಇರುವ ಮಾದರಿಯಲ್ಲಿ ಮೈದಾಡಿಯ ಪ್ರವೇಶ ದ್ವಾರದಲ್ಲೇ ತಪಾಸಣೆ ವ್ಯವಸ್ಥೆ ಜಾರಿಗೊಳಿಸಿ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನದಲ್ಲಿ ಪ್ರಸನ್ನ, ಸುಜನ್, ಸುಜಿತ್ ಬೆಳ್ಳ, ಉದಯ್ ಶೆಟ್ಟಿ, ವಿಜೇತ್ ಸೇರಿದಂತೆ ಹಲವರು ಭಾಗವಹಿಸಿದ್ದರು.
