ಕಳಸ ಲೈವ್ ವರದಿ
ಪಟ್ಟಣದ ಮುಖ್ಯ ರಸ್ತೆಯ ಅಂಚಿನಲ್ಲಿರುವ ಫುಟ್ಪಾತ್ಗಳ ಮೇಲೆ ವಾಹನಗಳನ್ನು ಹತ್ತಿಸುವುದರಿಂದ ಚಪ್ಪಡಿಗಳು ಪದೇಪದೇ ತುಂಡಾಗುತ್ತಿದ್ದು, ಸಾರ್ವಜನಿಕ ಆಸ್ತಿಯ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿ ಜತೆಗೆ ಸಾರ್ವಜನಿಕರೂ ಜವಾಬ್ದಾರಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರೇಂದ್ರ ಒತ್ತಾಯಿಸಿದರು.
ಕಳಸ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಫುಟ್ಪಾತ್ಗಳ ಚಪ್ಪಡಿಗಳು ವಾಹನಗಳ ಸಂಚಾರದಿAದ ಹಾನಿಗೊಳಗಾಗುತ್ತಿರುವ ಬಗ್ಗೆ ಗಮನ ಸೆಳೆದರು.
ವಿಶೇಷವಾಗಿ ಯಾರ ಮನೆಯ ಮುಂದೆ ಅಥವಾ ವಾಣಿಜ್ಯ ಕಟ್ಟಡಗಳ ಬಳಿ ಕಾಮಗಾರಿ ನಡೆಯುತ್ತಿದೆಯೋ, ಅಂತಹ ಸಂದರ್ಭಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ಹಾಗೂ ಇತರೆ ವಾಹನಗಳನ್ನು ಫುಟ್ಪಾತ್ ಮೇಲೆ ಹತ್ತಿಸುವುದರಿಂದ ಚಪ್ಪಡಿಗಳು ತುಂಡಾಗುತ್ತಿವೆ. ಕೆಲವೆಡೆ ವಾಹನಗಳನ್ನು ಫುಟ್ಪಾತ್ ಮೇಲೆಯೇ ನಿಲ್ಲಿಸುವುದರಿಂದಲೂ ಚಪ್ಪಡಿಗಳಿಗೆ ಹಾನಿಯಾಗುತ್ತಿದೆ ಎಂದು ಅವರು ತಿಳಿಸಿದರು.
ಫುಟ್ಪಾತ್ಗಳಿಗೆ ಹಾನಿ ಮಾಡುವವರೇ ನಂತರ ಚಪ್ಪಡಿಗಳು ತುಂಡಾಗಿವೆ ಎಂದು ಮಾಧ್ಯಮಗಳ ಮೂಲಕ ಗ್ರಾಮ ಪಂಚಾಯಿತಿ ವಿರುದ್ಧ ದೂರು ನೀಡುತ್ತಿರುವುದು ವಿಪರ್ಯಾಸವಾಗಿದೆ ಎಂದು ವೀರೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗೆ ಸಾರ್ವಜನಿಕ ಆಸ್ತಿಯನ್ನು ಕಾಪಾಡುವ ಜವಾಬ್ದಾರಿ ಎಷ್ಟಿದೆಯೋ, ಅಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಫುಟ್ಪಾತ್ಗಳನ್ನು ಹಾಳು ಮಾಡಿ ನಂತರ ಪಂಚಾಯಿತಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸುವುದು ಸರಿಯಲ್ಲ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪಂಚಾಯಿತಿಯ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.
ಫುಟ್ಪಾತ್ಗಳ ಚಪ್ಪಡಿಗಳು ಹಾನಿಗೊಳಗಾದಾಗ ಗ್ರಾಮ ಪಂಚಾಯಿತಿ ವತಿಯಿಂದ ಅವುಗಳನ್ನು ದುರಸ್ತಿ ಮಾಡಲು ಲಕ್ಷಾಂತರ ರೂಪಾಯಿ ಅನುದಾನ ವ್ಯಯಿಸಲಾಗುತ್ತಿದೆ. ವರ್ಷದಲ್ಲಿ ಸುಮಾರು ಮೂರು ಬಾರಿ ಹಾನಿಗೊಳಗಾದ ಚಪ್ಪಡಿಗಳನ್ನು ದುರಸ್ತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೇ ದುರಸ್ತಿ ಕಾರ್ಯ ಕೈಗೊಂಡರೂ ಮತ್ತೆ ವಾಹನಗಳನ್ನು ಫುಟ್ಪಾತ್ ಮೇಲೆ ಹತ್ತಿಸುವುದರಿಂದ ಚಪ್ಪಡಿಗಳು ಹಾನಿಗೊಳಗಾಗುತ್ತಿವೆ ಎಂದು ಅವರು ತಿಳಿಸಿದರು.
ಸಾರ್ವಜನಿಕರ ತೆರಿಗೆ ಹಾಗೂ ಸರ್ಕಾರದ ಅನುದಾನದಿಂದ ನಡೆಯುವ ಕಾಮಗಾರಿಗಳ ಹಣವನ್ನು ಪದೇಪದೇ ಒಂದೇ ಕಾಮಗಾರಿಯ ದುರಸ್ತಿಗೆ ಬಳಸುವ ಬದಲು, ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತಾಗಬೇಕು. ಇದಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವೀರೇಂದ್ರ ಮನವಿ ಮಾಡಿದರು.
ಪಂಚಾಯಿತಿ ಅಥವಾ ಶಾಸಕರ ಮೇಲೆ ವಿನಾಕಾರಣ ಆರೋಪ ಮಾಡುವ ಬದಲು, ಸಮಸ್ಯೆಗೆ ಕಾರಣವಾಗುತ್ತಿರುವ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕವೀಶ್, ಈಗಾಗಲೇ ಮುರಿದು ಬಿದ್ದಿರುವ ಹಾಗೂ ಹಾನಿಗೊಳಗಾದ ಫುಟ್ಪಾತ್ ಚಪ್ಪಡಿಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಮುಂದೆ ಫುಟ್ಪಾತ್ಗಳ ಮೇಲೆ ವಾಹನಗಳನ್ನು ಹತ್ತಿಸಿ ಉದ್ದೇಶಪೂರ್ವಕವಾಗಿ ಚಪ್ಪಡಿಗಳಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದು ಕಂಡುಬAದಲ್ಲಿ, ಹಾನಿಯ ಹೊಣೆಯನ್ನು ಸಂಬAಧಪಟ್ಟವರ ಮೇಲೆಯೇ ಹೊರಿಸಿ ಅವರಿಂದಲೇ ದಂಡ ವಸೂಲಿ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಫುಟ್ಪಾತ್ಗಳು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದು, ಅವುಗಳ ಮೇಲೆ ವಾಹನ ಸಂಚಾರ ಅಥವಾ ನಿಲುಗಡೆಗೆ ಅವಕಾಶ ನೀಡಬಾರದು. ಕಟ್ಟಡ ಕಾಮಗಾರಿ ನಡೆಸುವವರು ಸಹ ಸಾಮಗ್ರಿ ಸಾಗಿಸುವ ಸಂದರ್ಭದಲ್ಲಿ ಫುಟ್ಪಾತ್ಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪಿಡಿಒ ಸೂಚಿಸಿದರು.
ಕಳಸ ಪಟ್ಟಣದ ಮುಖ್ಯ ರಸ್ತೆಯ ಫುಟ್ಪಾತ್ಗಳು ಸಾರ್ವಜನಿಕರ ಸಂಚಾರಕ್ಕೆ ಪ್ರಮುಖವಾಗಿದ್ದು, ಅವುಗಳನ್ನು ನಿರಂತರವಾಗಿ ದುರಸ್ತಿ ಮಾಡುವುದಕ್ಕಿಂತ ಅವು ಹಾನಿಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಪಂಚಾಯಿತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದರ ಜತೆಗೆ ಸಾರ್ವಜನಿಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡರೆ ಮಾತ್ರ ಸಾರ್ವಜನಿಕ ಹಣದ ಅನಗತ್ಯ ವ್ಯಯವನ್ನು ತಡೆಯಲು ಸಾಧ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
