ಕಳಸ ಲೈವ್ ವರದಿ
ಕಳಸ ಪಟ್ಟಣದ ಮುಖ್ಯ ರಸ್ತೆಗಳ ಫುಟ್ಪಾತ್ಗಳನ್ನು ಅತಿಕ್ರಮಿಸಿ ಬೋರ್ಡ್ಗಳನ್ನು ಅಳವಡಿಸುವುದು ಹಾಗೂ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಕಳಸ ಗ್ರಾಮ ಪಂಚಾಯಿತಿ ಮುಂದಾಗಿದೆ.
ಸಾರ್ವಜನಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ನಿರ್ಮಿಸಿರುವ ಫುಟ್ಪಾತ್ಗಳೇ ಇದೀಗ ಅಂಗಡಿಗಳ ವಿಸ್ತರಣೆ, ಜಾಹೀರಾತು ಬೋರ್ಡ್ಗಳು ಹಾಗೂ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾರಾಂತ್ಯದಲ್ಲಿ ವಾಹನ ದಟ್ಟಣೆಯಿಂದ ರಸ್ತೆ ಮೇಲೆ ಸಂಚರಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ, ಫುಟ್ಪಾತ್ಗಳೂ ವ್ಯಾಪಾರಿಗಳ ಪಾಲಾಗಿರುವುದರಿಂದ ಸಾರ್ವಜನಿಕರು ಅಕ್ಷರಶಃ ಅತಂತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯ ರಸ್ತೆಯ ಫುಟ್ಪಾತ್ಗಳಲ್ಲಿ ಬೋರ್ಡ್ಗಳನ್ನು ನಿಲ್ಲಿಸುವುದು, ಸರಕುಗಳನ್ನು ಇಡುವುದು, ತಾತ್ಕಾಲಿಕ ಅಂಗಡಿಗಳನ್ನು ಹಾಕುವುದು ಸೇರಿದಂತೆ ವಿವಿಧ ರೀತಿಯಲ್ಲಿ ಜಾಗವನ್ನು ಅತಿಕ್ರಮಿಸಲಾಗುತ್ತಿದೆ.
ಈ ಕುರಿತು ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಹಲವು ದೂರುಗಳು ಬಂದಿದ್ದು, ಸಾರ್ವಜನಿಕ ವಲಯದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಫುಟ್ಪಾತ್ ಸಾರ್ವಜನಿಕರಿಗಾಗಿ ಇರುವುದೇ ಹೊರತು ವ್ಯಾಪಾರ ವಿಸ್ತರಣೆ ಅಥವಾ ಜಾಹೀರಾತು ಫಲಕಗಳಿಗಾಗಿ ಅಲ್ಲ ಎಂಬುದನ್ನು ಪಂಚಾಯಿತಿ ಇದೀಗ ಸ್ಪಷ್ಟಪಡಿಸಿದೆ.
ಗ್ರಾಮಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಳಸ ಗ್ರಾಮ ಪಂಚಾಯಿತಿ ಪಿಡಿಒ ಕವೀಶ್, ಸೋಮವಾರದಿಂದಲೇ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಫುಟ್ಪಾತ್ ಸಾರ್ವಜನಿಕರು ನಡೆದುಕೊಂಡು ಹೋಗಲು ಇರುವ ಜಾಗ. ಅಲ್ಲಿ ಬೋರ್ಡ್ಗಳನ್ನು ಇಡುವುದಾಗಲಿ, ವ್ಯಾಪಾರ ಮಾಡುವುದಾಗಲಿ ಸಹಿಸುವುದಿಲ್ಲ. ಫುಟ್ಪಾತ್ ಮೇಲೆ ಯಾವುದೇ ವಸ್ತು ಕಂಡುಬ0ದರೂ ಪಂಚಾಯಿತಿಯಿAದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪಿಡಿಒ ಕವೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ವಿಚಾರದಲ್ಲೂ ಪಂಚಾಯಿತಿ ಕಠಿಣ ನಿಲುವು ತಳೆದಿದೆ. ಪ್ರತಿಯೊಬ್ಬರೂ ಹಸಿಕಸ ಮತ್ತು ಒಣಕಸವನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಪಂಚಾಯಿತಿಗೆ ನೀಡಬೇಕು ಎಂದು ಪಿಡಿಒ ಸೂಚಿಸಿದ್ದಾರೆ.
