
ಕಳಸ ಲೈವ್ ವರದಿ
ಶ್ರಾವಣ ಮಾಸ ಹಾಗೂ ಗೌರಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಬೋಧಿನಿ ವಿದ್ಯಾ ಕೇಂದ್ರ, ಕಳಸದಲ್ಲಿ ವಿದ್ಯಾಭಾರತಿ ಕರ್ನಾಟಕದ ಬಾಲಿಕಾ ಶಿಕ್ಷಣದ ಆಶಯದಡಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಶಾಲೆಯ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರು ಹಾಗೂ ಅಹಲ್ಯಾಬಾಯಿ ಮಾತೃಭಾರತಿಯ ಸದಸ್ಯರಿಗೆ ಸಾಂಪ್ರದಾಯಿಕವಾಗಿ ಬಳೆ ತೊಡಿಸಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಪರಿಚಯಿಸಲಾಯಿತು.

ಗೌರಿ ಹಬ್ಬದ ಅಂಗವಾಗಿ ನಡೆದ ಈ ಕಾರ್ಯಕ್ರಮವು ಹೆಣ್ಣು ಮಕ್ಕಳಲ್ಲಿ ನಮ್ಮ ನಾಡಿನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಾಂಪ್ರದಾಯಿಕ ಜೀವನಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿತ್ತು. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಗಾಯತ್ರಿ ರತ್ನಾಕರ್ ಅವರು ಮಾತನಾಡಿ ಬಳೆ ಕೇವಲ ಅಲಂಕಾರದ ವಸ್ತುವಲ್ಲ; ಭಾರತೀಯ ಪರಂಪರೆಯಲ್ಲಿ ಅದಕ್ಕೆ ವಿಶೇಷವಾದ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಮಹತ್ವವಿದೆ. ಬಳೆಯ ಝೇಂಕಾರವೂ ಸಾಂಪ್ರದಾಯಿಕ ಬದುಕಿನ ಸೊಬಗನ್ನು ಹೆಚ್ಚಿಸುವ ಸಂಕೇತವಾಗಿದೆ. ಫ್ಯಾಷನ್ ಹೆಸರಿನಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ದೂರವಾಗುತ್ತಿರುವ ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಉಡುಗೆಗಳ ಮಹತ್ವವನ್ನು ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಧರಿಸಿದ್ದ ಉದ್ದ ಲಂಗ ಹಾಗೂ ಸಾಂಪ್ರದಾಯಿಕ ಉಡುಗೆಗಳನ್ನು ಮೆಚ್ಚಿ, ಇಂತಹ ಉಡುಗೆಗಳು ಭಾರತೀಯ ಸಂಸ್ಕೃತಿಯ ಸೊಬಗು ಹಾಗೂ ಹೆಣ್ಣಿನ ಘನತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣ್ಯರು ಮಕ್ಕಳ ನಡತೆ, ಶಿಸ್ತು ಹಾಗೂ ತಂದೆ-ತಾಯಿ ಮತ್ತು ಹಿರಿಯರಿಗೆ ನೀಡಬೇಕಾದ ಗೌರವದ ಕುರಿತು ಮಾರ್ಗದರ್ಶನ ನೀಡಿದರು. ಮನೆ ಎಂಬುದು ನಂದಗೋಕುಲದAತೆ ಪ್ರೀತಿ, ಸಂಸ್ಕಾರ ಹಾಗೂ ನೆಮ್ಮದಿಯಿಂದ ಕೂಡಿರಬೇಕು. ಹೆಣ್ಣು ಮಕ್ಕಳು ಕುಟುಂಬದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಗೀತ ಗಾಯನ ನಡೆಯಿತು. ಶ್ರಾವಣದ ಸಂಭ್ರಮ, ಗೌರಿ ಹಬ್ಬದ ಸೊಬಗು ಹಾಗೂ ಸಾಂಪ್ರದಾಯಿಕ ವಾತಾವರಣದಲ್ಲಿ ಬಾಲಕಿಯರಿಗೆ ಬಳೆ ತೊಡಿಸಿದ ಕ್ಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕಳಸದ ಗುಚ್ಚ ಸಂಪನ್ಮೂಲ ಕೇಂದ್ರದ ಅಧಿಕಾರಿ ಶ್ರೀಮತಿ ಸಾವಿತ್ರಿ ಅವರು ಉಪಸ್ಥಿತರಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
