ಕಳಸ ಲೈವ್ ವರದಿ
ಮರದ ಕೊಂಬೆ ಬಿದ್ದು ಅಕಾಲಿಕವಾಗಿ ಮೃತಪಟ್ಟ ಸಂಸೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಕ್ರಿಯ ಸದಸ್ಯರಾಗಿದ್ದ ಶ್ರೀಯುತ ರಘುನಾಥ್ ಹೆಚ್.ಕೆ. ಅವರ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ₹50,000 ಆರ್ಥಿಕ ನೆರವು ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಅವರ ತಾಯಿ ಕಮಲಮ್ಮ ಅವರಿಗೆ ವಿತರಿಸಲಾಯಿತು.
ಕಳೆದ ಎರಡು ತಿಂಗಳ ಹಿಂದೆ ಮರದ ಕೊಂಬೆ ಬಿದ್ದು ರಘುನಾಥ್ ಅವರು ಅಕಾಲಿಕವಾಗಿ ಮೃತಪಟ್ಟಿದ್ದರು. ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಯೋಜನೆಯು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ರಘುನಾಥ್ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ₹50,000 ಮೊತ್ತದ ಮಂಜೂರಾತಿ ಪತ್ರವನ್ನು ಕಮಲಮ್ಮ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್, ಶೃಂಗೇರಿ–ಕಳಸ ತಾಲ್ಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಮಹೇಶ್ ಬಿ.ಕೆ., ಕಳಸ ವಲಯ ಮೇಲ್ವಿಚಾರಕ ಮಂಜುನಾಥ್, ಸೇವಾಪ್ರತಿನಿಧಿಗಳಾದ ಅರುಣ್ ಹಾಗೂ ರಾಮ್ ಪ್ರಕಾಶ್ ಸೇರಿದಂತೆ ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.
