ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಬಾಳೆಖಾನ್- ಎಡೂರು ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಂಗಳವಾರ ತಾಲ್ಲೂಕು ಕಛೇರಿ ಉಪ ತಹಶೀಲ್ದಾರ್ ಹೇಮಂತ್ ಕುಮಾರ್ ಮತ್ತು ಕಳಸ ಠಾಣಾಧಿಕಾರಿ ಹರ್ಷವರ್ದನ್ ಅವರಿಗೆ ಮನವಿ ನೀಡಿ ನಂತರ ತಮ್ಮ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದರು.

ಸುಮಾರು 200 ಮನೆಗಳಿರುವ ಈ ಗ್ರಾಮದ ರಸ್ತೆಯ ಪರಿಸ್ಥಿತಿ ತೀರ ಹದೆಗೆಟ್ಟುಹೋಗಿದೆ.ಕಳೆದ 16 ವರ್ಷಗಳಿಂದ ರಸ್ತೆಯ ದುರಸ್ತಿಯ ಬಗ್ಗೆ ಜನಪ್ರತಿನಿಧಿಗಳ ಬಳಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮನವಿಗೆ ಯಾರೂ ಕೂಡ ಸ್ಪಂದಿಸಲೇ ಇಲ್ಲ. ನಿತ್ಯ ಪ್ರಯಾಣ ಮಾಡುವ ಶಾಲಾ ಮಕ್ಕಳ ಪರಿಸ್ಥಿತಿಯನ್ನು ಕೇಳೋದೆ ಬೇಡ. ಆಸ್ಪತ್ರೆಗೆ ಹೋಗಲು, ದಿನ ನಿತ್ಯ ಗೃಹ ಬಳಕೆಯ ಸಾಮಾನು ತರಲು ಸಾಕಷ್ಟು ತೊಂದರೆ ಪಡಬೇಕಾಗಿದೆ.

ಪ್ರತೀ ಬಾರಿ ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳ ಬರವಸೆಯನ್ನು ಕೇಳಿ ಕೇಳಿ ಸಾಕಾಗಿದೆ.ನಮ್ಮ ಮೂಲಭೂತ ಸೌಲಭ್ಯಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವುದಿಲ್ಲ ಎಂದಾದಮೇಲೆ ಇವರಿಗೆ ನಮ್ಮ ಮತ ಯಾಕಾಗಿ ಬೇಕು. ಇದರಿಂದ ಈ ಬಾರಿ ಚುನಾವಣೆಯನ್ನು ಬಹಿಷ್ಕಾರ ಮಾಡುತಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರತ್, ಶ್ರೀನಾಥ್, ಕರುಣಾಕರ, ಶುಭಕರ, ಪ್ರತಾಪ್, ಸುಭಾಶ್ ಇತರರು ಇದ್ದರು.


