ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವತಿಯಿಂದ ಸಂಸೆಯ ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಾರ್ಷಿಕ ಶಿಬಿರ ಆಯೋಜಿಸಲಾಗಿದ್ದು, ಶಿಬಿರದ ಭಾಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ವಿಧಾನಸಭಾಕ್ಷೇತ್ರದ ಶಾಸಕಿ ನಯನಾ ಮೋಟಮ್ಮ“ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತಿಮುಖ್ಯ. ನಮ್ಮ ಕೌಟುಂಬಿಕ ಹಿನ್ನೆಲೆ ಹೇಗೇ ಇದ್ದರೂ ಪರಿಶ್ರಮ ಮಾತ್ರವೇ ನಮ್ಮನ್ನು ನಿರ್ಧಿಷ್ಟ ಗುರಿಯೆಡೆಗೆ ಯಶಸ್ವಿಯಾಗಿ ಸಾಗುವಂತೆ ಮಾಡುತ್ತದೆ. ಸುಂದರ ಪರಿಸರದಲ್ಲಿ ವಾಸಿಸುತ್ತಿರುವ ನೀವೆಲ್ಲರು ಜೀವನವನ್ನು ಲಘುವಾಗಿ ಪರಿಗಣಿಸದೆ ಸರಿಯಾದ ಗುರಿ ಮತ್ತು ದೃಡ ಪ್ರಯತ್ನವನ್ನು ಹೊಂದಿದವರಾಗಿರಬೇಕು. ಕಳಸದಲ್ಲಿ ಈಗಾಗಲೇ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾರ್ಯನಿರ್ವಹಿಸುತ್ತಿದ್ದು, ಬಾಲಕರ ವಸತಿ ನಿಲಯ ಇಲ್ಲದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದರು.

ಶಿಬಿರಾರ್ಥಿಗಳಿಗಾಗಿ ಆಯೋಜಿಸಿದ್ದ ‘ಭಾರತ ಸಂವಿಧಾನ ಪರಿಚಯ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ವಕೀಲ ಸುಧೀರ್ ಕುಮಾರ್ ಮುರೊಳ್ಳಿ “ಶತಮಾನಗಳ ಕಾಲದಿಂದ ದುರ್ಬಲ ವರ್ಗದವರು ಅನುಭವಿಸುತ್ತಿದ್ದ ಶೋಷಣೆಯನ್ನು ಸಮಾಜದಿಂದ ಕೊನೆಗಾಣಿಸುವ ಏಕೈಕ ಆದಾರವಾಗಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತವಾಗಿರುವ ಭಾರತದ ಸಂವಿಧಾನ. ಇಂದು ದುರ್ಬಲ ವರ್ಗದವರೂ ಸರ್ಕಾರದ ಆಡಳಿತ, ಸರ್ಕಾರಿ ಹುದ್ದೆ, ಶಿಕ್ಷಣವನ್ನು ಸಮಾನವಾಗಿ ಪಡೆದುಕೊಳ್ಳಲು ಸಾಧ್ಯವಾಗಿರುವುದು ಇದೇ ಸಂವಿಧಾನದಿಂದಾಗಿ, ಹಾಗಾಗಿ ಭಾರತ ಸಂವಿಧಾನವು ಸಮಾಜದ ಎಲ್ಲಾ ದುರ್ಬಲ ವರ್ಗದವರನ್ನು ರಕ್ಷಿಸುವ ಧರ್ಮಗ್ರಂಥವಾಗಿದೆ” ಎಂದುಅಭಿಪ್ರಾಯ ಪಟ್ಟರು.

“ವಿದ್ಯಾರ್ಹತೆ ಮಾತ್ರವೇ ನಮ್ಮ ಯಶಸ್ಸಿಗೆ ದಾರಿಯಾಗುವುದಿಲ್ಲ, ಯಾವುದೇ ವಿಷಯದ ಬಗ್ಗೆ ನಮ್ಮಲ್ಲಿರುವ ಆಸಕ್ತಿ, ಪ್ರಯತ್ನಗಳು ಮಾತ್ರವೇ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಚಾರ್ಲಿ ಚಲನಚಿತ್ರದ ನಿರ್ದೇಶಕ ಕಿರಣ್ರಾಜ್ ಅಭಿಪ್ರಾಯಪಟ್ಟರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರತೆಯಿರುವ ಉಪನ್ಯಾಸ ಕೊಠಡಿಗಳ ನಿರ್ಮಾಣಕ್ಕೆ, ಆಟದ ಮೈದಾನ, ಕಾಲೇಜು ಉದ್ಯಾನವನದ ಅಭಿವೃದ್ಧಿ, ಕಾಲೇಜು ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಾಣ ಹಾಗೂ ಇತರಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಪಟ್ಟಂತೆ ಮನವಿಯನ್ನು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಶಾಸಕರಿಗೆ ಸಲ್ಲಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣಇಲಾಖೆಯ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಇಲಾಖೆ ಯಯೋಜನಾ ಸಮನ್ವಯಾಧಿಕಾರಿ ಭಾಗೀರತಿ ಮಾಹಿತಿ ನೀಡಿದರು.
ಮಾಜಿಜಿಲ್ಲಾ ಪಂಚಾಯಿತಿ ಸದಸ್ಯಕೆ.ಆರ್ ಪ್ರಭಾಕರ್, ಉದ್ಯಮಿ ರವಿ ರೈ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಹೆಬ್ಬಾರ್, ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ಕಳಸ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೇಣಿಕ್, ಸಂಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರತಿಮಾ ಚಕ್ರೇಶ್ವರ್, ಸದಸ್ಯೆ ಮಮತಾ, ಕಳಸ ಪಂಚಾಯತಿ ಸದಸ್ಯ ವಿರೇಂದ್ರ, ಸ್ಥಳೀಯರಾದ ಸುಜಿತ್ಬೆಳ್ಳಾ, ಎನ್.ಎಸ್.ಎಸ್ ಕಾರ್ಯಕ್ರಮದಾಧಿಕಾರಿ ವಿಶುಕುಮಾರ್ ಮತ್ತುಇತರರು ಉಪಸ್ಥಿತರಿದ್ದರು.
