ಕಳಸ ಲೈವ್ ವರದಿ
ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ.ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಮಹಿಳೆಯ ಮೇಲೆ ದಾಳಿ ಮಾಡಿದ ಕಾಡಾನೆ ಕೊಂದು ಹಾಕಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೀನಾ 45 ವರ್ಷ ಕಾಡಾನೆದಾಳಿಗೆ ಬಲಿಯಾದ ದುರ್ದೈವಿ.
ಇಂದು ಬೆಳ್ಳಂ ಬೆಳಗ್ಗೆ ಗ್ರಾಮದ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿದ ಒಂಟಿ ಸಲಗ ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ಮೀನಾ ಅವರ ಮೇಲೆ ದಾಳಿ ನಡೆಸಿದ್ದು, ಮಹಿಳೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.ಕಾಡಾನೆ ಮಹಿಳೆಯ ತಲೆಭಾಗಕ್ಕೆ ದಾಳಿ ಮಾಡಿದ್ದು, ತಲೆಯಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಅಸುನೀಗಿದ್ದಾರೆ.
ಅಲ್ದೂರು ಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಸುಮಾರು 7 ಕಾಡಾನೆಗಳ ಗುಂಪು ಸಂಚಾರ ಮಾಡುತ್ತಿದೆ.ಈಗ್ಗೆ ಕೆಲ ದಿನಗಳ ಹಿಂದೆ ಕಂಚಿನಕಲ್ ದುರ್ಗಾ ಎಂಬಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.ಇದೀಗ ಮತ್ತೊಂದು ಜೀವ ಆಲ್ದೂರು ಭಾಗದಲ್ಲಿ ಕಾಡಾನೆಗೆ ಬಲಿಯಾಗಿದೆ.
7 ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿದ್ದ ಒಚಿಟಿ ಸಲಗ ಇಂದು ಹೆಡದಾಳು ಗ್ರಾಮದೊಳಗೆ ನುಗ್ಗಿದೆ.ಗ್ರಾಮದೊಳಗೆ ಕಾಡಾನೆ ಸಂಚಾರ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆ ಕಾಡಾನೆಯನ್ನು ಅಟ್ಟುವ ಪ್ರಯತ್ನ ಸಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.ಆನೆಗಳ ಹಿಂಡು ಊರಿಂದೂರಿಗೆ ಸಂಚರಿಸುತ್ತಾ ಅಪಾರ ಹಾನಿ ಮಾಡುತ್ತಿದೆ.ಜೀವ ಭಯ ಮೂಡಿಸುತ್ತಿವೆ.ಜನರನ್ನು ಬಲಿ ಪಡೆಯುತ್ತಿದೆ.