DCIM100MEDIADJI_0601.JPG




ಕಳಸ ಲೈವ್ ವರದಿ
ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಇಲ್ಲಿನ ಕಲಶೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀ ಕಲಶೇಶ್ವರನ ರಥಾರೋಹಣ ಸಂಭ್ರಮದಿಂದ ನೆರವೇರಿತು.
ಪಟ್ಟಣದ ಸುತ್ತಮುತ್ತಲ ಹೊರನಾಡು,ಬಾಳೆಹೊಳೆ,ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು,ಮರಸಣಿಗೆ,ಹಿರೇಬೈಲು,ಜಾವಳಿ,ಬಸರಿಕಟ್ಟೆ ಮತ್ತಿತರೆ ಕಡೆಯಿಂದ ಜನಸಾಗರವೇ ಹರಿದುಬಂದಿತ್ತು.
ಪ್ರತಿಯೊಬ್ಬರೂ ಶ್ರೀ ಕಲಶೇಶ್ವರನಿಗೆ ತಲೆಬಾಗಿ ಗಂಧ ಪ್ರಸಾದ ಸ್ವೀಕರಿಸಿದರು.ಸ್ಥಳೀಯ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡುವ ಪ್ರವಾಸಿಗರೂ ಜಾತ್ರೆಯಲ್ಲಿ ಬಾಗವಹಿಸಿ ಭಕ್ತಿ ಮೆರೆದರು.
ಊರು ತುಂಬೆಲ್ಲ ತಳಿರು ತೋರಣಗಳನ್ನು ಕಟ್ಟಲಾಗಿತ್ತು.ಇಡೀ ದೇವಾಲಯ ವಿದ್ಯುದ್ವೀಪಗಳಿಂದ ಶೃಂಗಾರಗೊಂಡಿತ್ತು.ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನ ಆಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.
ಮಧ್ಯಾಹ್ನ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತಾ ಛತ್ರಿ,ಚಾಮರ,ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು.ಕಲಶೇಶ್ವರನ ಉತ್ಸವ ಮೂರ್ತಿಯನ್ನು ಭವ್ಯ ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು.ಆ ವೇಳೆ ಭಕ್ತಾದಿಗಳು ದೇವರಿಗೆ ಫಲ ಪುಷ್ಪಾದಿ ಆರ್ಚನೆ ಮಾಡಿದರು.ತಾವು ಬೆಳೆದ ಕಾಫಿ,ಕಾಳುಮೆಣಸು,ಏಲಕ್ಕಿ ಇನ್ನಿತರೆ ಧಾನ್ಯ ಸಮರ್ಪಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮರಥವನ್ನು ಶ್ವೇತ ವಸ್ತ್ರದಾರಿಗಳು ರಥ ಎಳೆದರು.
ರಥಾರೋಹಣದ ವೈಭವವನ್ನು ಕೇವಲ ಆಸ್ತಿಕರಷ್ಟೇ ಅಲ್ಲದೆ ನಾಸ್ತಿಕರು ಕಣ್ತುಬಿಂಸಿಕೊಂಡು ಸಂಭ್ರಮಿಸಿದರು.ಜನರು ಭಕ್ತಿ ಸಾಗರದಲ್ಲಿ ಮುಳುಗಿದರೆ ಜಾತ್ರೆಯ ಸಂತೆ,ವ್ಯಾಪಾರ ವಹಿವಾಟುಗಳಲ್ಲಿ ಇನ್ನೊಂದು ವರ್ಗ ಮುಳುಗಿದ್ದರು.


























