ಕಳಸ ಲೈವ್ ವರದಿ
ಅದೃಷ್ಟ ರಾಜಕಾರಣಿಗಳಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮೊದಲಿಗರು. ಗ್ರಾ.ಪಂ. ಚುನಾವಣೆಯಿಂದ ಹಿಡಿದು, ರಾಜ್ಯ ರಾಜಕಾರಣದವರೆಗೂ ತನ್ನದೇ ಭಾವು ಮೂಡಿಸಿದ್ದ ಅವರು ಈಗ ರಾಷ್ಟ್ರ ರಾಜಕಾರಣದ ಹೆಬ್ಬಾಗಿಲು ಮುಟ್ಟಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ 4ನೇ ಸಂಸದರಾಗಿ ಸಂಸತ್ ಭವನಕ್ಕೆ ಕಾಲಿಡುತ್ತಿದ್ದಾರೆ. ಗ್ರಾ.ಪಂ.ನಿಂದ ಲೋಕಸಭೆ ಯವರೆಗೂ ಇವರ ಪ್ರಯಾಣ ಬಹು ಸೋಜಿಗ ಗ್ರಾ.ಪಂ.ನಿಂದ ಸಂಸತ್ವರೆಗೂ ಸಾಗಿದ ಜಿಲ್ಲೆಯ ಏಕೈಕ ರಾಜಕಾರಣಿಯೂ ಹೌದು. ಗ್ರಾ.ಪಂ., ತಾ. ಪಂ., ಜಿ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನಂತರ ವಿಧಾನ ಪರಿಷತ್ ಸದಸ್ಯರಾದರು. ಸಚಿವರಾದರು, ವಿಧಾನ ಪರಿಷತ್ ವಿಪಕ್ಷ ನಾಯಕರಾದರು. ಪಕ್ಷ ಎರಡು ಬಾರಿ ವಿಧಾನ ಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿತ್ತು. ವಿಧಾನಸಭೆಯ ಸದಸ್ಯರಾಗಲು ಸಾಧ್ಯವಾಗಿಲ್ಲ. ಸಕ್ರಿಯ ರಾಜಕಾರಣಿ ಜತೆಗೆ ಗ್ರಾಮೀಣಾಭಿವೃದ್ಧಿ ವಿಷಯವಾಗಿ ವಿಶೇಷ ಅಧ್ಯಯನ, ಜ್ಞಾನಹೊಂದಿದ್ದಾರೆ.ಹಾಗೆಯೇ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿ ಎಂಬ ಹೆಗ್ಗಳಿಕೆಯೂ ಇದೆ.

ರಾಜಕೀಯ ಹಿನ್ನೆಲೆ
1993ರಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ, 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯ, 2004ರಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ 2005ರಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾಗಿ ಆಯ್ಕೆ ಆನಂತರ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 2008ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2012ರಲ್ಲಿ ರಾಜ್ಯ ಮುಜರಾಯಿ ಸಚಿವರಾಗಿ ಅಧಿಕಾರ ಸ್ವೀಕಾರ, 2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪುನರ್ ಆಯ್ಕೆಯಾದರು. 2018ರಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದರು. 2019ರಲ್ಲಿ ರಾಜ್ಯ ಸಂಪುಟ ದರ್ಜೆಯ ಸಚಿವರಾಗಿ ರಾಜಕೀಯ ಭಡ್ತಿ ಪಡೆದರು. 2021ರಲ್ಲಿ ಪುನಃ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಸಚಿವರಾದರು. 2023ರಲ್ಲಿ ವಿಧಾನ ಪರಿಷತ್ ವಿಪಕ್ಷನಾಯಕರಾಗಿ ಆಯ್ಕೆಯಾದರು. 2024ರಲ್ಲಿ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ, ಇದೀಗ ಲೋಕಸಭಾ ಸದಸ್ಯರಾಗಿ ಆಯ್ಕೆ

ಕೌಟುಂಬಿಕ ಜೀವನ
ಬ್ರಹ್ಮಾವರ ತಾಲೂಕಿನ ಕೋಟದವರಾದ ಇವರು ಕೃಷಿಕ ಅಣ್ಣಪ್ಪ ಪೂಜಾರಿ ಮತ್ತು ಲಚ್ಚಿ ಪೂಜಾರಿ ದಂಪತಿ ಪುತ್ರ. 1960ರ ಜ.1 ರಂದು ಹುಟ್ಟಿದ ಇವರಿಗೆ ಈಗ 59 ವರ್ಷ. ಪತ್ನಿ ಶಾಂತಾ, ಮೂವರು ಮಕ್ಕಳು (ಎರಡು ಗಂಡು, ಒಂದು ಹೆಣ್ಣು), 7ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾರೆ. ಸಾಮಾನ್ಯ ಕೃಷಿ ಕುಟುಂಬದಿಂದ ಪಕ್ಷದ ಕೇಡರ್ ವ್ಯವಸ್ಥೆಯಲ್ಲಿ ಬೆಳೆದು ಬಂದು ನಾಯಕರಾದವರು. ವಿಶೇಷವಾಗಿ ಸಂಘ ಪರಿವಾರದ ಪ್ರಮುಖರೊಂದಿಗೆ ಉತ್ತಮ ಬಾಂಧವ್ಯ ಹಿಂದಿನಿಂದಲೂ ಹೊಂದಿದ್ದಾರೆ ಮತ್ತು ಈಗಲೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
