
ಕಳಸ ಲೈವ್ ವರದಿ
ಇಲ್ಲಿನ ತಾಲ್ಲೂಕು ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕದ ವತಿಯಿಂದ ಮಂಗಳವಾರ ಜಾನಪದ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಜಾನಪದ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬ0ಧವನ್ನು ಸಾರಲಾಯಿತು.
ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅಜಿತ್ ಪ್ರಸಾದ್,
ನಮ್ಮ ಜಾನಪದ ಸಂಸ್ಕೃತಿಯು ಪ್ರಕೃತಿಯ ಆರಾಧನೆಯಿಂದಲೇ ಮೈದಳೆದಿದೆ. ಗಿಡ ಮರ, ಕಲ್ಲು ಬಂಡೆ, ನದಿ ತೊರೆಗಳನ್ನು ದೈವಿಕವಾಗಿ ಕಾಣುವ ಗುಣ ನಮ್ಮ ಜನಪದರಲ್ಲಿದೆ. ಕೇವಲ ಭಾಷೆ, ಕಲೆಯಷ್ಟೇ ಅಲ್ಲದೆ ಪ್ರಕೃತಿಯನ್ನು ಉಳಿಸುವುದು ಕೂಡ ಜಾನಪದ ಪರಿಷತ್ತಿನ ಮುಖ್ಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಜಾನಪದ ಪರಿಸರ ದಿನಾಚರಣೆಗೆ ಪರಿಷತ್ತಿನ ಕೊಡುಗೆಯಾಗಿ ಕೇವಲ ಅಲಂಕಾರಿಕ ಗಿಡಗಳನ್ನಷ್ಟೇ ನೆಡದೆ, ಮುಂದಿನ ಪೀಳಿಗೆಗೆ ಹಾಗೂ ಪಕ್ಷಿ ಸಂಕುಲಕ್ಕೆ ಆಸರೆಯಾಗುವಂತಹ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮಹಿಳಾ ಜಾನಪದ ಪರಿಷತ್ತಿನ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಪ್ರಕೃತಿಯನ್ನು ನಾವು ಭೂಮಿ ತಾಯಿ ಎಂದು ಕರೆಯುತ್ತೇವೆ. ತಾಯಿಯಾದವಳು ಇಡೀ ಸಂಸಾರವನ್ನು ಹೇಗೆ ಪೋಷಿಸುತ್ತಾಳೋ, ಹಾಗೆಯೇ ಈ ಪ್ರಕೃತಿ ನಮ್ಮನ್ನು ಸಲಹುತ್ತಿದೆ. ಜನಪದ ಹೆಣ್ಣುಮಗಳು ತನ್ನ ದೈನಂದಿನ ಬದುಕಿನಲ್ಲಿ, ಹಾಡುಗಳಲ್ಲಿ ಪರಿಸರವನ್ನೇ ಉಸಿರಾಡಿದ್ದಾಳೆ. ಇಂದಿನ ಆಧುನಿಕ ಜಗತ್ತಿನಲ್ಲಿ ಪರಿಸರ ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ. ಪ್ರತಿಯೊಬ್ಬ ಮಹಿಳೆಯೂ ತನ್ನ ಮನೆಯಂಗಳದಲ್ಲಿ, ಹಸಿರನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಗಿಡ ಮರಗಳ ಮೇಲಿನ ಪ್ರೀತಿಯನ್ನು ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಇದ್ದರು.
