
ಕಳಸ ಲೈವ್ ವರದಿ
ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸವಿರುವ ಮೂಲ ನಿವಾಸಿಗಳ ಹಕ್ಕು ಸಂರಕ್ಷಣೆ ಮಾಡಿ ಅವರ ಕೃಷಿ ಭೂಮಿ ಉಳಿಸಬೇಕು ಎಂದು ಉದ್ಯಾನ ವ್ಯಾಪ್ತಿಯ ನಿವಾಸಿಗಳು ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದರು.
ಕುದುರೆಮುಖ ಗಿರಿ ಶ್ರೇಣಿಗೆ ಚಾರಣ ಕೈಗೊಂಡ ನಂತರ ಶಾಸಕಿ ನಯನಾ ಅವರು ಸಂಸೆ ಗ್ರಾಮದಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರವಾಗಿ ಸುರೇಶ್ ಭಟ್ ಮನವಿ ಸಲ್ಲಿಸಿದರು.
ಕುದುರೆಮುಖ ವ್ಯಾಪ್ತಿಯ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು.ಆ ಮೂಲಕ ಉದ್ಯಾನ ವ್ಯಾಪ್ತಿಯ ಜನರ ಬದುಕು ಉಳಿಸಬೇಕು ಎಂದು ಸುರೇಶ್ ಭಟ್ ಶಾಸಕಿಯನ್ನು ಒತ್ತಾಯಿಸಿದರು.ಕೃಷಿಕರ ಭೂಮಿಯನ್ನು ಅರಣ್ಯ ಇಲಾಖೆ ತನ್ನದು ಎಂದು ಹೇಳುತ್ತಿದೆ.ತಲೆತಲಾಂತರದಿಂದ ಇಲ್ಲಿ ನೆಲೆಸಿರುವವರಿಗೆ ಸ್ಥಳಾಂತರದ ಭೀತಿ ಎದುರಾಗಿದೆ ಎಂದು ಅವರು ತಿಳಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಬಳಿ ವಿಷಯ ಪ್ರಸ್ತಾಪಿಸಿಸುವುದಾಗಿ ಭರವಸೆ ನೀಡಿದರು.
ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಗಣೇಶ್, ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ಸುಜಿತ್ ಬೆಳ್ಳ, ಶ್ರೀನಿವಾಸ, ಪ್ರವೀಣ್, ರಫೀಕ್, ವಿಶ್ವನಾಥ್, ವೀರೇಂದ್ರ ಜೈನ್, ಸಂಶುದ್ದೀನ್, ಕುದುರೆಮುಖ ಆರ್ಎಫ್ಒ ಜ್ಯೋತಿ ಮೆಣಸಿನಕಾಯಿ, ಬೆಳ್ತಂಗಡಿ ಆರ್ಎಫ್ಒ ಸ್ವಾತಿ, ಕಳಸ ಪಿಎಸೈ ಬರ್ಮಪ್ಪ ಬೆಳಗಲಿ, ಕುದುರೆಮುಖ ಪಿಎಸೈ ಆದರ್ಶ್ ಗೌಡ ಇದ್ದರು.