ಕಳಸ ಲೈವ್ ವರದಿ
ಕಳಸ ಕೈಮರ ಸಮೀಪ ಸರ್ವೆ ನಂ 641ರಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದು ಕೂಡಲೇ ತೆರವು ಮಾಡಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಭಾರತೀಯ ಕಮ್ಯೂನಿಷ್ಟ್ ಪಕ್ಷದ ಮುಖಂಡರಿಬ್ಬರು ಕಳಸ ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಕಳಸ ಕೈಮರ ಸಮೀಪ ಸರ್ವೆ ನಂ 641ರಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ.ಇದೇ ಭೂಮಿಯನ್ನು ಇನ್ನೊಬ್ಬ ವ್ಯಕ್ತಿಗೆ ಅಕ್ರಮವಾಗಿ ವ್ಯಾಪಾರ ನಡೆಸಲು ಅವಕಾಶ ಕೊಟ್ಟಿದ್ದರು.ಇದನ್ನು ಪಂಚಾಯಿತಿ ಗಮನಕ್ಕೂ ತರಲಾಗಿತ್ತು.ಅಲ್ಲದೆ ಈ ಬಗ್ಗೆ ನ್ಯಾಯಲಯಕ್ಕೆ ದೂರನ್ನೂ ಕೂಡ ನೀಡಿದ್ದೆವು. ಪ್ರಕರಣ ನ್ಯಾಯಲಯದ ಮೆಟ್ಟಿಲಲ್ಲಿರುವಾಗ ಈಗ ಆ ವ್ಯಕ್ತಿಯು ಅದೇ ಭೂಮಿಯಲ್ಲಿ ಪಂಚಾಯಿತಿಯ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಕಟ್ಟಡವನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.ಈ ಭೂಮಿಯು ಸರ್ಕಾರಿ ಭೂಮಿಯಾಗಿದ್ದು, ಅನಧಿಕೃತವಾಗಿ ಕಟ್ಟುತ್ತಿರುವ ಕಟ್ಟಡವನ್ನು ಖುಲ್ಲಾ ಪಡಿಸಿ ನ್ಯಾಯಲಯದ ತೀರ್ಪು ಬರುವ ವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು.ಇದು ಮುಂದುವರೆದರೆ ನಾಳೆಯಿಂದ ನಮ್ಮ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸಿಪಿಐ ಮುಖಂಡ ಲಕ್ಷ್ಮಣಾಚಾರ್ ತಿಳಿಸಿದರು.
ನಾವು ನಮಗಾಗಿ ಭೂಮಿ ಕೇಳುತ್ತಿಲ್ಲ ಕೋಟ್ಯಾಂತರ ರೂ ಬೆಲೆಬಾಳುವ ಭೂಮಿಯನ್ನು ಯಾವುದೇ ದಾಖಲಾತಿ ಇಲ್ಲದೆ ಖಾಸಾಗಿ ವ್ಯಕ್ತಿಯೊಬ್ಬರು ಕಬಳಿಸಿ ಅನಧಿಕೃತ ಕಟ್ಟಡ ಕಟ್ಟುತ್ತಿದ್ದಾರೆಂದರೆ ಇದನ್ನು ಪ್ರಶ್ನಿಸುವ ಹಕ್ಕು ನಮಗೆ ಇದೆ. ಪಕ್ಕದಲ್ಲಿ ಕಲಶೇಶ್ವರ ದೇವಸ್ಥಾನ ಇದೆ ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತಾಧಿಗಳು ಬರುತ್ತಿದ್ದಾರೆ.ಬರುವ ಭಕ್ತಾಧಿಗಳಿಗೆ ವಾಹನ ನಿಲ್ಲಿಸಲು ಇದೇ ಭೂಮಿಯನ್ನು ಬಳಸಿಕೊಳ್ಳಬಹುದು. ಕೂಡಲೇ ಕಟ್ಟುತ್ತಿರುವ ಕಟ್ಟಡವನ್ನು ಖುಲ್ಲಾ ಮಾಡಿಸಿ ಎಂದು ಇನ್ನೊರ್ವ ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಹೇಳಿದರು.
ಈ ಬಗ್ಗೆ ಕಳಸ ಲೈವ್ ಗೆ ಪ್ರತಿಕ್ರೀಯೆ ನೀಡಿದ ಕಳಸ ಪಿಡಿಒ ಕವೀಶ್, ಸರ್ವೆ ನಂ 641ರಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಜುಲೈ 1 ರಂದು ಸಂಭಂದಿಸಿದ ವ್ಯಕ್ತಿಗೆ ನೊಟೀಸು ಜಾರಿ ಮಾಡಲಾಗಿದೆ.ಆದರೂ ಕಟ್ಟಡ ಕಾಮಗಾರಿ ಮುಂದುವರೆಸುತ್ತಿರುವುದನ್ನು ಗಮನಿಸಿ ಮೂರನೇ ತಾರಿಕಿನಂದು ಮತ್ತೆ ನೊಟೀಸು ಜಾರಿ ಮಾಡಿ, ನಂತರ ಈ ಬಗ್ಗೆ ಕಳಸ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.