ಕಳಸ ಲೈವ್ ವರದಿ
ಕಳಸ-ಬಾಳೆಹೊನ್ನೂರು ರಸ್ತೆ ಮಧ್ಯೆ ಸಿಗುವ ಹಳುವಳ್ಳಿ ಸೇತುವೆಯ ಮರು ನಿರ್ಮಾಣಕ್ಕೆ ಸರ್ಕಾರಕ್ಕೆ ಲೋಕೋಪಯೋಗಿ ಇಲಾಖೆ 20 ಕೋಟಿ ಅನುದಾನಕ್ಕಾಗಿ ಪ್ರಸ್ತಾವಣೆಯನ್ನು ಸಲ್ಲಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕಳಸ-ಬಾಳೆಹೊನ್ನೂರು ರಸ್ತೆ ಮಧ್ಯ ಭದ್ರಾ ನದಿಗೆ ಕಟ್ಟಿದ ಹಳುವಳ್ಳಿ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿ ದುರಸ್ತಿಗೆ ವರದಿ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಆಗಿಲ್ಲ..
ಸೇತುವೆಯ ಮೂರು ಆಧಾರ ಸ್ತಂಭಗಳು ಸಂಪೂರ್ಣ ಶಿಥಿಲಗೊಂಡು ಕಬ್ಬಿಣದ ರಾಡುಗಳು ಮೇಲೆದ್ದು ಬಂದಿವೆ. ಮಳೆಗಾಲದಲ್ಲಿ ನೀರಲ್ಲಿ ತೇಲಿ ಬರುವ ಮರದ ದೊಡ್ಡ ದಿಮ್ಮಿಗಳು ಹೊಡೆದು ಬಹಳಷ್ಟು ಹಾನಿಯಾಗಿದೆ. ಇದರಿಂದ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಳಸ ಲೈವ್ ಮೇ 19 ರಂದು ವರದಿ ಮಾಡಿತ್ತು. ನಂತರ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ದೂರನ್ನು ಕೂಡ ನೀಡಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಈ ಸೇತುವೆಯ ಮರು ನಿರ್ಮಾಣಕ್ಕಾಗಿ ಸರ್ಕಾರಕ್ಕೆ 20 ಕೋಟಿಯ ಅನುದಾನಕ್ಕಾಗಿ ಪ್ರಸ್ತಾವಣೆಯನ್ನು ಸಲ್ಲಿಸಿದೆ.
ಹಳುವಳ್ಳಿ ಸೇತುವೆ ಶಿಥಿಲಗೊಂಡಿರುವ ಬಗ್ಗೆ ಹಳುವಳ್ಳಿ ಶೈಲೇಶ್ ಕಳಸ ಲೈವ್ ಗಮನಕ್ಕೆ ತಂದಿದ್ದರು.




