
ಕಳಸ ಲೈವ್ ವರದಿ
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅಪಘಾತವೆಸಗಿದ್ದಲ್ಲದೇ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ವಿಜಯ್, ಸತ್ಯ, ಶಿವು, ಪುನೀತ್ ಕುಮಾರ್ ಪುಂಡಾಟ ನಡೆಸಿ ಬಂಧನಕ್ಕೊಳಗಾದವರು.
ಪಾನಮತ್ತರಾಗಿದ್ದ ಪ್ರವಾಸಿಗರು ಚಾಲನೆ ಮಾಡುತ್ತಿದ್ದ ಕಾರೊಂದು ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್ ಚಾಲಕ ಸೇರಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ಹುಚ್ಚಾಟ ಆಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿ ಆರಂಭದಲ್ಲಿನತೇಜಸ್ವಿ ಪ್ರತಿಷ್ಠಾನದ ಸಮೀಪ ನಿಂತಿದ್ದ ಕಾರಿಗೆ ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಬೆಂಗಳೂರು ಮೂಲದ ಪ್ರವಾಸಿಗರಿದ್ದ ಕಾರು ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.
ಸುದ್ದಿ ತಿಳಿದು ಸ್ಥಳದಲ್ಲಿದ್ದ ಸ್ಥಳೀಯರು ಆಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಈ ಸಂದರ್ಭದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನೆ ಮಾಡಿದರು.
ಇದರಿಂದ ಕುಪಿತಗೊಂಡ ಪ್ರವಾಸಿಗರ ಗುಂಪು ಪೊಲೀಸರ ಎದುರೇ ಸ್ಥಳೀಯರು ಮತ್ತು ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು,ಈ ದೃಶ್ಯವನ್ನು ಅನ್ಯ ಪ್ರವಾಸಿಗರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಆರಿಫ್ ಅವರು ಎದೆ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೀಫ್ ಅವರು ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಅಪಘಾತ ನಡೆದರೂ ಸ್ಥಳಕ್ಕೆ ಧಾವಿಸಿ ನೆರವಿಗೆ ನಿಲ್ಲುವುದು ಸಾಮಾನ್ಯ.ಪ್ರಪಾತಕ್ಕೆ ಬಿದ್ದ ವಾಹನಗಳನ್ನು ಮೇಲೆತ್ತಲು,ಶವಗಳನ್ನು ಮೇಲೆತ್ತಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆಯೇ ಹಲ್ಲೆ ನಡೆದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದರು.
ಹಲ್ಲೆ ನಡೆಸಿರುವ ಪಾನಮತ್ತ ಪ್ರವಾಸಿಗರ ವಿರುದ್ಧ ಬಣಕಲ್ ಠಾಣೆಯಲ್ಲಿ ಮೂರು ಪ್ರಕರಣ(ಪಾನಮತ್ತ ಚಾಲನೆ,ಬೀದಿ ಜಗಳ, ಸಾರ್ವಜನಿಕರಿಗೆ ತೊಂದರೆ) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.