
ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಕೆಲವೊಮ್ಮೆ ಪ್ರತಿಭೆಗಳು ದೊಡ್ಡ ನಗರಗಳಲ್ಲಿ ಅಥವಾ ಸುಸಜ್ಜಿತ ತರಬೇತಿ ಕೇಂದ್ರಗಳಲ್ಲಿ ಅರಳುವುದಿಲ್ಲ; ಬದಲಾಗಿ ಹಸಿರು ಕಾಫಿ ನಾಡಿನ ಯಾವುದೋ ಮೂಲೆಯ ಪುಟ್ಟ ಹಳ್ಳಿಯೊಂದರಲ್ಲಿ ಸದ್ದಿಲ್ಲದೆ ಅರಳುತ್ತವೆ. ಇದಕ್ಕೆ ತಾಜಾ ಉದಾಹರಣೆ ಕಳಸ ತಾಲ್ಲೂಕಿನ ಹಿರೇಬೈಲ್ ಸಮೀಪದ ಕೋರೆ ನಿವಾಸಿಯಾದ ಸಂದೀಪ್ ಕೆ.ಜಿ. ಕ್ರಿಕೆಟ್ ಲೋಕಕ್ಕೆ ಇವರು ಪರಿಚಿತರಾಗಿರುವುದು ‘ಮೊಟ್ಟೆ’ ಎಂಬ ಪ್ರೀತಿಯ ಹೆಸರಿನಿಂದ.
ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ. ಮೈದಾನದಲ್ಲಿ ಬ್ಯಾಟ್-ಬಾಲ್ ಸದ್ದು ಮಾಡುತ್ತಿದ್ದರೆ, ಮೈದಾನದ ಹೊರಗೆ ತನ್ನ ಕಂಚಿನ ಕಂಠದಿAದ ನೋಡುಗರಲ್ಲಿ ರೋಮಾಂಚನ ಮೂಡಿಸುವ ಶಕ್ತಿ ವೀಕ್ಷಕ ವಿವರಣೆಗಾರನದ್ದು. ಅಂತಹದ್ದೇ ಒಂದು ಅದ್ಭುತ ಪ್ರತಿಭೆ ಕ್ರಿಕೆಟ್ ಅಭಿಮಾನಿಗಳ ಪ್ರೀತಿಯ ‘ಮೊಟ್ಟೆ’.

ಸಂದೀಪ್ ಅವರ ಯಶಸ್ಸಿನ ಹಿಂದೆ ಯಾವುದೇ ದೊಡ್ಡ ಕೋಚಿಂಗ್ ಸಂಸ್ಥೆಯ ಕೈವಾಡವಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಇವರಿಗೆ ಕನ್ನಡದ ಮೇಲೆ ಅಪಾರ ಪ್ರೀತಿ. ಆಟಗಾರನಾಗಿ ಮೈದಾನಕ್ಕಿಳಿದ ಸಂದೀಪ್, 2017ರಲ್ಲಿ ಮೈಕ್ ಹಿಡಿದಾಗ ಹೊಸ ಇತಿಹಾಸ ಆರಂಭವಾಯಿತು. ಅವರ ಕನ್ನಡದ ಸ್ಪಷ್ಟತೆ ಮತ್ತು ಶಬ್ದ ಸಂಪತ್ತು ಯಾವುದೇ ದೊಡ್ಡ ವಿಶ್ವವಿದ್ಯಾಲಯದ ಪದವೀಧರನಿಗಿಂತ ಕಡಿಮೆಯಿಲ್ಲ. ಯಾವುದೇ ಅಧಿಕೃತ ತರಬೇತಿ ಅಥವಾ ಕೋಚಿಂಗ್ ಪಡೆಯದೆ, ಸ್ವ-ಪ್ರಯತ್ನದಿಂದ ಅವರು ಬೆಳೆಸಿಕೊಂಡಿರುವ ವೀಕ್ಷಕ ವಿವರಣೆಯ ಶೈಲಿ ಇಂದು ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ.ರಾಜ್ಯದ ಮೂಲೆ ಮೂಲೆಗಳಲ್ಲಿ ನೂರಾರು ಕ್ರಿಕೆಟ್ ಪಂದ್ಯಾವಳಿಗಳಿಗೆ ಇವರ ಅಚ್ಚಗನ್ನಡದ ಲೀಲಾಜಾಲ ವೀಕ್ಷಕ ವಿವರಣೆ ಕಳೆ ತರುತ್ತಿದೆ. ಕೇವಲ ಮಾಹಿತಿ ನೀಡುವುದು ಮಾತ್ರವಲ್ಲದೆ, ಕೇಳುವವನಿಗೆ ರೋಮಾಂಚನ ಮತ್ತು ಮನೋರಂಜನೆ ನೀಡುವುದು ಇವರ ವೈಶಿಷ್ಟ್ಯ. ಅಚ್ಚಗನ್ನಡದ ಲೀಲಾಜಾಲ ಮಾತುಗಳು, ಆಟದ ಓಟಕ್ಕೆ ತಕ್ಕಂತೆ ಏರಿಳಿಯುವ ಧ್ವನಿ ಮತ್ತು ಕೇಳುಗನನ್ನು ಮೈದಾನದ ಒಳಗೆ ಕರೆದೊಯ್ಯುವ ಅವರ ವಿಶಿಷ್ಟ ದಾಟಿ ಕ್ರಿಕೆಟ್ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಇಂದು ‘ಮೊಟ್ಟೆ’ ಅವರ ಕಾಮೆಂಟರಿ ಇದೆ ಎಂದ ಕೂಡಲೇ ಕ್ರೀಡಾಂಗಣಕ್ಕೆ ಧಾವಿಸುವ ಯುವ ಸಮೂಹವೇ ಇದೆ ಎಂದರೆ, ಅವರ ಧ್ವನಿಯಲ್ಲಿರುವ ಕಾಂತಶಕ್ತಿಯನ್ನು ಅರ್ಥ ಮಾಡಿಕೊಳ್ಳಬಹುದು.
ಶಾಂತ, ಮೃದು, ಮಿತ ಬಾಷಿಯಾದ ಸಂದೀಪ್ ತನ್ನ ದೈನಂದಿನ ಜೀವನಕ್ಕಾಗಿ ಆಟೋ ಚಾಲಕನ ವೃತ್ತಿ ಮಾಡುತ್ತಿದ್ದರೂ, ಸಂದೀಪ್ ಅವರ ಹೃದಯ ಮಿಡಿಯುವುದು ಮಾತ್ರ ಕ್ರಿಕೆಟ್ಗಾಗಿ. ತನ್ನ ಸಂಪಾದನೆಯ ಒಂದು ಭಾಗವನ್ನು ಕ್ರೀಡೆಗಾಗಿ ಮೀಸಲಿಡುವ ಇವರ ಗುಣ ನಿಜಕ್ಕೂ ಶ್ಲಾಘನೀಯ. ಸ್ವತಃ ಕಷ್ಟಪಟ್ಟು ಮೇಲೆ ಬಂದ ಅವರಿಗೆ, ಸ್ಥಳೀಯ ಪ್ರತಿಭೆಗಳು ಅವಕಾಶ ವಂಚಿತರಾಗಬಾರದು ಎಂಬ ಹಂಬಲವಿದೆ.
ದೊಡ್ಡ ನಗರಗಳಲ್ಲಿ ನಡೆಯುವ ಐಪಿಎಲ್ ಮಾದರಿಯ ವೈಭವವನ್ನು ಹಿರೇಬೈಲ್ನಂತಹ ಗ್ರಾಮೀಣ ಭಾಗಕ್ಕೆ ತಂದ ಕೀರ್ತಿ ಸಂದೀಪ್ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಈ ಬಾರಿ 5ನೇ ವರ್ಷದ ಎಚ್ಪಿಎಲ್ ಸಂಭ್ರಮಕ್ಕೆ ಸಜ್ಜಾಗಿದೆ.
ಹೊರಗಿನ ಆಟಗಾರರಿಗಿಂತ ಮಣ್ಣಿನ ಮಕ್ಕಳಿಗೆ ವೇದಿಕೆ ಕಲ್ಪಿಸುವುದು ಈ ಲೀಗ್ನ ಮುಖ್ಯ ಉದ್ದೇಶ.

ಪ್ರತೀ ವರ್ಷ ಅವರು ನಡೆಸುವ ಕ್ರಿಕೇಟ್ ಪಂದ್ಯಾವಳಿಯ ಶಿಸ್ತು, ಬಿಡ್ಡಿಂಗ್ ಪ್ರಕ್ರಿಯೆ, ಜರ್ಸಿ ವಿತರಣೆ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆಯುವ ಈ ಪಂದ್ಯಾವಳಿ ಜಿಲ್ಲೆಯ ಕ್ರೀಡಾ ಪ್ರೇಮಿಗಳ ಗಮನ ಸೆಳೆದಿದೆ.
ಆರ್ಥಿಕ ಸವಾಲುಗಳ ನಡುವೆಯೂ ದಾನಿಗಳ ಸಹಕಾರದಿಂದ 1,01,111, 50,555. 15055, 10111 ರೂಪಾಯಿಗಳ ಬೃಹತ್ ಮೊತ್ತವನ್ನು ಘೋಷಿಸಿರುವುದು ಪಂದ್ಯಾವಳಿಯ ಗತ್ತನ್ನು ಹೆಚ್ಚಿಸಿದೆ.
ಏಪ್ರಿಲ್ 23 ರಿಂದ 26 ರವರೆಗೆ ನಡೆಯಲಿರುವ ಈ ಕ್ರಿಕೆಟ್ ಹಬ್ಬವು ಕೇವಲ ಆಟವಲ್ಲ; ಇದು ಒಬ್ಬ ಸಾಮಾನ್ಯ ಆಟೋ ಚಾಲಕನ ಅಸಾಮಾನ್ಯ ಕನಸಿನ ಪ್ರತಿಬಿಂಬ. ಕಳಸ, ಬಾಳೂರು, ಮಾಗುಂಡಿ ಹಾಗೂ ಬನಕಲ್ನ ಪ್ರತಿಭಾವಂತ ಆಟಗಾರರಿಗೆ ಇಂತಹ ಲೀಗ್ಗಳು ಭರವಸೆಯ ಬೆಳಕಾಗಿವೆ. ತನ್ನ ವಿಶಿಷ್ಟ ವೀಕ್ಷಕ ವಿವರಣೆಯ ಮೂಲಕ ಎಲ್ಲರ ಮನ ಗೆದ್ದಿರುವ ಸಂದೀಪ್ (ಮೊಟ್ಟೆ) ಅವರ ಈ ಕ್ರೀಡಾ ಯಜ್ಞ ಯಶಸ್ವಿಯಾಗಲಿ. ಮೈದಾನದಲ್ಲಿ ಅವರ ಧ್ವನಿ ಇನ್ನು ದಶಕಗಳ ಕಾಲ ಮೊಳಗುತ್ತಿರಲಿ.ಇಂತಹ ಅದ್ಬುತ ಮತ್ತು ಅತೀ ವಿರಳವಾಗಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಕೂಡ ಸಂಘ ಸಂಸ್ಥೆಗಳು ಮಾಡಬೇಕು ಎಂಬುದು ಕಳಸ ಲೈವ್ ಮತ್ತು ಕಳಸ ತಾಲ್ಲೂಕಿನ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಆಶಯ.
