
ಕಳಸ ಲೈವ್ ವರದಿ
(ಸುಧೀಶ್ ಸುವರ್ಣ)
ವಿಧಿ ಆಟವಾಡಿದರೂ ವಿಶ್ವಾಸ ಸೋಲದು ಎಂಬುದಕ್ಕೆ ಕಳಸ ಸಮೀಪದ ಮರಸಣಿಗೆ ಗ್ರಾಮದ ಚಾವಡಿಬೈಲಿನ ಈ ಬಾಲಕಿ ಶುಭಶ್ರೀ ಜ್ವಲಂತ ಉದಾಹರಣೆ. ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದ ನಡುವೆಯೂ, ಮೈ ನಡುಗುತ್ತಿದ್ದರೂ ಧೃತಿಗೆಡದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 561 ಅಂಕಗಳನ್ನು ಗಳಿಸಿ ಹಿರೇಬೈಲು ಸರ್ಕಾರಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿರುವ ಈಕೆಯ ಸಾಧನೆ ಕಣ್ಣಾಲಿಗಳನ್ನು ತೇವಗೊಳಿಸುವಂತಿದೆ.
ಎ0ಟನೇ ತರಗತಿಯಲ್ಲಿದ್ದಾಗ ಅಕಸ್ಮಾತ್ ಆಗಿ ತಲೆ ತಿರುಗಿ ಬಿದ್ದ ಶುಭಶ್ರೀಗೆ ಅಂದಿನಿ0ದ ಶುರುವಾದ ಕಷ್ಟದ ಸರಮಾಲೆ ಇಂದಿಗೂ ಮುಂದುವರಿಯುತ್ತಿದೆ. ವೈದ್ಯಕೀಯ ತಪಾಸಣೆಯಲ್ಲಿ ಮೆದುಳಿನ ನರಗಳ ಸಮಸ್ಯೆ ಹಾಗೂ ತೀವ್ರ ಸಕ್ಕರೆ ಕಾಯಿಲೆ ಇರುವುದು ದೃಢಪಟ್ಟಿತ್ತು. ಸರಿಯಾಗಿ ನಡೆಯಲು ಆಗದ, ಬರೆಯಲು ಕೈಗಳು ಸಹಕರಿಸದ ಸ್ಥಿತಿಯಲ್ಲೂ ಆಟೋದಲ್ಲಿ ಶಾಲೆಗೆ ತೆರಳಿ ಅಬ್ಯಾಸ ಮಾಡುತ್ತಿದ್ದ ಈಕೆಯ ಛಲ ಅದಮ್ಯ. ಪರೀಕ್ಷಾ ಕೇಂದ್ರಕ್ಕೆ ತಂದೆ ಎತ್ತಿಕೊಂಡು ಹೋಗಿ ಕೂರಿಸುತ್ತಿದ್ದ ಆ ದೃಶ್ಯಗಳು ಎಂತವರನ್ನೂ ಭಾವುಕರನ್ನಾಗಿಸುತ್ತವೆ. ಇಂದು ಬಂದಿರುವ 561 ಅಂಕಗಳು ಕೇವಲ ಅಂಕಿಅ0ಶಗಳಲ್ಲ, ಅವು ಶುಭಶ್ರೀಯ ಕಣ್ಣೀರು ಮತ್ತು ಕಠಿಣ ಪರಿಶ್ರಮದ ಫಲ.

ಒಂದೆಡೆ ಮಗಳ ಅನಾರೋಗ್ಯ, ಇನ್ನೊಂದೆಡೆ ಬಡತನ. ತಾಯಿ ಪುಷ್ಪ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಮರ ಹತ್ತುವ ಕೆಲಸ ಮಾಡುತ್ತಿದ್ದ ತಂದೆ ಗಣೇಶ್ ಅವರು ಮೂರು ವರ್ಷಗಳ ಹಿಂದೆ ಮರದಿಂದ ಬಿದ್ದು ಸೊಂಟ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡು ಕೆಲಸ ಮಾಡಲಾಗದ ಪರಿಸ್ಥಿತಿ. ಮಗಳ ಚಿಕಿತ್ಸೆಗಾಗಿ ಈಗಾಗಲೇ 15 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿರುವ ಈ ಕುಟುಂಬ ಇಂದು ಬೀದಿಗೆ ಬಂದು ನಿಂತಿದೆ. ಪ್ರತಿ ತಿಂಗಳು ಮಂಗಳೂರಿಗೆ ಹೋಗಿ ಚಿಕಿತ್ಸೆ ಕೊಡಿಸಲು, ಇನ್ಸುಲಿನ್ ಮತ್ತು ಔಷಧಗಳಿಗಾಗಿ ಸಾವಿರಾರು ರೂಪಾಯಿ ಬೇಕಿದೆ. ಮುಂದಿನ ಚಿಕಿತ್ಸೆಗೆ ಹಣವಿಲ್ಲದ ಅಸಹಾಯಕ ಸ್ಥಿತಿ ಇವರದ್ದು.
ನನ್ನಲ್ಲಿ ಆರೋಗ್ಯ ಇಲ್ಲ, ನಡೆಯಲು ಆಗುತ್ತಿಲ್ಲ, ಆದರೂ ಕಷ್ಟಪಟ್ಟು ಓದಿದ್ದೇನೆ. ಮುಂದೆ ಸಿಎ ಆಗಬೇಕೆಂಬ ದೊಡ್ಡ ಕನಸಿದೆ, ಆದರೆ ನನ್ನ ಆರೋಗ್ಯ ಮತ್ತು ಪರಿಸ್ಥಿತಿ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೋ ಎಂಬ ಭಯವಾಗುತ್ತಿದೆ ಎಂದು ಶುಭಶ್ರೀ ಕಣ್ಣೀರಿಡುತ್ತಾ ನುಡಿಯುವ ಮಾತುಗಳು ಸಮಾಜದ ಪ್ರತಿಯೊಬ್ಬರನ್ನೂ ಪ್ರಶ್ನಿಸುತ್ತಿವೆ. ಕರ್ನಾಟಕ ಓಪನ್ ಸ್ಕೂಲ್ನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಇಚ್ಛೆ ಹೊಂದಿರುವ ಈ ಪ್ರತಿಭೆಗೆ ಈಗ ತುರ್ತಾಗಿ ಬೇಕಿರುವುದು ಮಾನವೀಯತೆಯ ಆಸರೆ.
ಅನಾರೋಗ್ಯದ ನಡುವೆಯೂ ಅಸಾಧಾರಣ ಸಾಧನೆ ಮಾಡಿರುವ ಈ ‘ಛಲದಂಕ ಮಲ್ಲಿಗೆ’ಯ ಮುಂದಿನ ವಿದ್ಯಾಭ್ಯಾಸ ಮತ್ತು ಚಿಕಿತ್ಸೆಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಒಂದು ಪ್ರತಿಭಾವಂತ ಜೀವ ಬಡತನ ಮತ್ತು ಅನಾರೋಗ್ಯದ ಕಾರಣಕ್ಕೆ ಕಮರಿ ಹೋಗಬಾರದು.
ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಇದೇ ಸಂಖ್ಯೆಗೆ ಮೂಲಕ ನಿಮ್ಮ ಕೈಲಾದ ಆರ್ಥಿಕ ಸಹಾಯ ಮಾಡಬಹುದು:
ದೂರವಾಣಿ ಸಂಖ್ಯೆ: 9480096240
ನಮ್ಮ ಸಣ್ಣ ಸಹಾಯ ಶುಭಶ್ರೀಯ ದೊಡ್ಡ ಕನಸಿಗೆ ರೆಕ್ಕೆ ನೀಡಬಲ್ಲದು. ಬನ್ನಿ, ಈ ಸಾಧಕಿಯ ಬೆನ್ನಿಗೆ ನಿಲ್ಲೋಣ
