ಕಳಸ ಲೈವ್ ವರದಿ
ಗ್ರಾಮದಲ್ಲಿ ಆನೆಗಳ ಮಿತಿ ಮೀರಿದ ಉಪಟಲದಿಂದ ಸಾಕಷ್ಟು ಕೃಷಿಯನ್ನು ಹಾನಿ ಮಾಡಿದ್ದು, ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟ ಆನೆಗಳನ್ನು ಸ್ಥಳಂತರ ಮಾಡಬೇಕು ಎಂದು ಒತ್ತಾಯಿಸಿ ಹಾದಿಓಣಿ ಮತ್ತು ಕೂವೆ ಗ್ರಾಮಸ್ಥರು ಕಳಸ ವಲಯ ಸಂರಕ್ಷಣಾಧಿಕಾರಿ ನಿಶ್ಚಿತ್ ಅವರಿಗೆ ಮನವಿ ಸಲ್ಲಿಸಿದರು.
ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಓಣಿ, ಅಮ್ತಿ, ಕೆಳಮನೆ, ಕೂಡ್ಲಿ, ಆಚಾರ್ ಪಾಲ್, ಧನ್ನಕ್ಕಿ, ಹೊಳೆಕುಡಿಗೆ, ನಿಡ್ನಳ್ಳಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಎರಡು ಕಾಡಾನೆಗಳು ಬೀಡು ಬಿಟ್ಟಿದ್ದು, ಇದರಿಂದ ರೈತರು ಬೆಳೆದ ಅಡಿಕೆ, ಕಾಫೀ, ಮೆಣಸು, ಬಾಳೆಗಿಡ ಇನ್ನಿತರೆ ಕೃಷಿ ಬೆಳೆಗಳನ್ನು ಸಂಪೂರ್ಣ ನಾಶಗೊಳಿಸುತ್ತಿದ್ದು, ರೈತರು ತಮ್ಮ ಜಮೀನಿನಲ್ಲಿ ಜೀವ ಭಯದಲ್ಲಿ ಓಡಾಡುವಂತಾಗಿದೆ.ಹಾಗೂ ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಕಷ್ಟಕರವಾಗಿರುತ್ತದೆ ಹಾಗಾಗಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಹಾಗೂ ತಮ್ಮ ಬೆಳೆಗಳಿಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಡಿದ ಕಳಸ ಆರ್ಎಪ್ಒ ನಿಶ್ಚಿತ್ ಕಾಡಾನೆಗಳು ಗ್ರಾಮದಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಮಳೆ ಇರುವ ಪರಿಣಾಮ ಹೊಳೆಯಲ್ಲಿ ಹೆಚ್ಚು ನೀರು ಇರುವುದರಿಂದ ಆನೆ ಓಡಿಸಲು ಸಾಧ್ಯವಾಗಲಿಲ್ಲ.ನೀರು ಸ್ವಲ್ಪ ಕಡಿಮೆಯಾದ ಕೂಡಲೇ ಆನೆ ಓಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶೋಕ, ಕವೀಶ್ ಕೃಷ್ಣೇಗೌಡ, ದಿವೀಶ್, ಪ್ರದೀಪ, ನಾಗೇಶ ಗೌಡ, ಗಣಪತಿ, ದಿನೇಶ ಆಚಾರ್ಯ ಪ್ರಶಾಂತ್, ದಿನೆಶ್ ಗೌಡ, ಸಚಿನ್, ಚಂದ್ರು ಇತರರು ಇದ್ದರು.