

ಕಳಸ ಲೈವ್ ವರದಿ
ಕಳಸ ಪಟ್ಟಣದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಮಗ್ರವಾಗಿ ದಾಖಲಿಸುವ “ಶ್ರೀ ಕಲ್ಯಾಣ ಕಲಶೇಶ್ವರ ಚರಿತೆ ಮಹಿಮೆ” ಎಂಬ ಮಹತ್ವದ ಗ್ರಂಥವು ಭಕ್ತಿಪೂರ್ಣ ವಾತಾವರಣದಲ್ಲಿ ಲೋಕಾರ್ಪಣೆಗೊಂಡಿತು.
ಖ್ಯಾತ ವೈಧ್ಯರಾದ ಡಾ. ವಿಶ್ವನಾಥ ಪ್ರಭು ಹಾಗೂ ರಾಜಲಕ್ಷ್ಮೀ ಬಿ. ಜೋಷಿ ಅವರು ಗ್ರಂಥವನ್ನು ಬಿಡುಗಡೆಗೊಳಿಸಿ ಕೃತಿಗೆ ಶುಭಹಾರೈಕೆ ಸಲ್ಲಿಸಿದರು.
ಕಳಸ ಮೂಲದ ಲೇಖಕ ವಿವೇಕಾನಂದ ಭಟ್ಟ ಕಳಸ ರಚಿಸಿರುವ ಈ ಕೃತಿ, ಕಲಶೇಶ್ವರ ದೇವಾಲಯದ ಪುರಾತನ ಇತಿಹಾಸ, ಧಾರ್ಮಿಕ ಮಹತ್ವ, ಶತಮಾನಗಳಿಂದ ನಡೆದು ಬಂದ ಆಚರಣೆಗಳು, ದೇವಾಲಯದ ವೈಭವ, ಸ್ಥಳೀಯ ಜನಜೀವನ ಹಾಗೂ ಧಾರ್ಮಿಕ ಉತ್ಸವಗಳ ಸಮಗ್ರ ದಾಖಲೆಯಾಗಿದೆ. ಕಳಸ ಪ್ರದೇಶದ ಸಾಂಸ್ಕೃತಿಕ ಹಿನ್ನೆಲೆಯನ್ನು ಆಳವಾಗಿ ಅನಾವರಣಗೊಳಿಸುವಲ್ಲಿ ಈ ಗ್ರಂಥ ಮಹತ್ವದ ಪಾತ್ರ ವಹಿಸಿದೆ.
ಗ್ರಂಥಕರ್ತ ವಿವೇಕಾನಂದ ಭಟ್ಟ ಕಳಸ ಮಾತನಾಡಿ, ಕಲಶೇಶ್ವರ ದೇವಾಲಯ ಹಾಗೂ ಕಳಸ ಪ್ರದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕೃತಿ ರಚಿಸಲಾಗಿದೆ. ಇದು ಕೇವಲ ಧಾರ್ಮಿಕ ಗ್ರಂಥವಲ್ಲ; ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಆತ್ಮತತ್ತ್ವವನ್ನು ದಾಖಲಿಸುವ ಐತಿಹಾಸಿಕ ದಸ್ತಾವೇಜು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಶೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ಕೆ.ಕೆ. ಬಾಲಕೃಷ್ಣ ಭಟ್, ರಾಘವೇಂದ್ರ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಗ್ರಂಥ ರಚನೆಯನ್ನು ಶ್ಲಾಘಿಸಿದರು
