ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಐದು ವರ್ಷಗಳ ಅಧಿಕಾರ ಅವಧಿಯು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳಾದ ನಾಗರಾಜ ಎನ್. ಅವರು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
2020-2025ನೇ ಸಾಲಿನಲ್ಲಿ ರಚನೆಯಾಗಿದ್ದ ಗ್ರಾಮ ಪಂಚಾಯಿತಿಗಳ ಅವಧಿಯು 2026ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಹೊಸದಾಗಿ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವವರೆಗೂ ದೈನಂದಿನ ಕಾರ್ಯಕಲಾಪಗಳನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 8 ರನ್ವಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಕಳಸ ತಾಲ್ಲೂಕಿನ ಈ ಕೆಳಕಂಡ ಪಂಚಾಯಿತಿಗಳಿಗೆ ಆಯಾ ಇಲಾಖೆಯ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ಜವಾಬ್ದಾರಿ ನೀಡಲಾಗಿದೆ.
ಕಳಸ ಮತ್ತು ಹೊರನಾಡು: ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್.
ಸAಸೆ: ಕುದುರೆಮುಖ ವಲಯದ ವಲಯ ಅರಣ್ಯಾಧಿಕಾರಿ.
ಮರಸಣಿಗೆ ಮತ್ತು ತೋಟದೂರು: ಕಳಸ ವಲಯದ ವಲಯ ಅರಣ್ಯಾಧಿಕಾರಿ.
ಇಡಕಣಿ: ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ.
ಪಂಚಾಯಿತಿಯ ಹಣಕಾಸಿನ ವ್ಯವಹಾರಗಳನ್ನು ಆಡಳಿತಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸಬೇಕು. ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಮತ್ತು ಗ್ರಂಥಾಲಯ ಮೇಲ್ವಿಚಾರಕರಿಗೆ ಗೌರವಧನವನ್ನು ತಪ್ಪದೇ ಪಾವತಿಸಲು ಸೂಚಿಸಲಾಗಿದೆ.
ಆಡಳಿತಾಧಿಕಾರಿಯ ಅವಧಿಯಲ್ಲಿ ಯಾವುದೇ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಕಾಲಕಾಲಕ್ಕೆ ನಡೆಸಲು ಕ್ರಮ ಕೈಗೊಳ್ಳಬೇಕು.
ಈ ಆದೇಶವು ಆಯಾ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಮುಗಿದ ಮರುದಿನದಿಂದಲೇ ಜಾರಿಗೆ ಬರಲಿದ್ದು, ಹೊಸ ಸಮಿತಿ ರಚನೆಯಾಗುವವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
