ಕಳಸ ಲೈವ್ ವರದಿ
ಹಿಂದೂ ಧರ್ಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಪೂಜಿಸಲ್ಪಡುವ ದೇವರುಗಳಲ್ಲಿ ಭಗವಾನ್ ಶ್ರೀಕೃಷ್ಣನು ಪ್ರಮುಖನು. ಭಗವಾನ್ ವಿಷ್ಣುವಿನ ಎಂಟನೇ ಅವತಾರವಾಗಿ ಭಗವಾನ್ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣನ ಬಾಲಲಿಲೆಗಳು ಹಲವಾರಿವೆ ಅದರಲ್ಲಿ ಪೆಟ್ಲವೂ ಒಂದು.
ತನ್ನ ಬಾಲ್ಯದ ದಿನಗಳಲ್ಲಿ ಹಿರಿಯರು ಮದ್ದು ಗುಂಡುಗಳು ಹಾಗೂ ಶಬ್ದಕ್ಕಾಗಿ ಬಳಸುತ್ತಿದ್ದ ತುಪಾಕೆಗಳನ್ನು ನೋಡಿ ತನಗೂ ಶಬ್ದ ಬರುವ ಆಟಿಕೆ ವಸ್ತುಬೇಕು ಎಂದು ಯಶೋದೆಯಲ್ಲಿ ಹಠ ಹಿಡಿದಾಗ ಸೃಷ್ಟಿಯಾದ ಶಬ್ದ ಮಾಡುವ ಹಸಿರು ಪಟಾಕಿಯೇ ಪೆಟ್ಲಾವಾಗಿದೆ.
ಕಾಲಕ್ರಮೇಣ ಇದು ಜನ್ಮಾಷ್ಟಮಿಯ ವಿಟ್ಲಪಿಂಡಿಯ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಿದಿರಿನ ಕೋಲಿನಿಂದ ತಯಾರಿಸುವ ಈ ಪೆಟ್ಲಕ್ಕೆ ಅರಮರಲುಕಾಯಿ ಹಾಗು ಜುಮ್ಮನ ಕಾಯಿಯನ್ನು ಇದರ ನಳಿಕೆಯ ಒಳಗೆ ತೂರಿ ಹೊಡೆದರೆ ಶಬ್ದದೊಂದಿಗೆ ಹೊರಬರುತ್ತದೆ.
ಈ ಸಂಪ್ರಾದಯ ಕಲಶೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಗೆ ಸಂದರ್ಭದಲ್ಲಿ ಪೆಟ್ಲ ಹೊಡೆಯುತ್ತಿದ್ದರು.ಆದರೆ ಕಳೆದ ಹಲವಾರು ವರ್ಷಗಳಿಂದ ಅದು ನಿಂತು ಹೋಗಿತ್ತು. ಆದರೆ ಈ ಬಾರಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಇದರ ಅಧ್ಯಕ್ಷ ರಜಿತ್ ಕೆಳಗೂರು ಇವರ ಉಸ್ತುವಾರಿಕೆಯಲ್ಲಿ ಪೆಟ್ಲ ಹೊಡೆಯುವ ಕಾರ್ಯುಕ್ರಮಕ್ಕೆ ಮರು ಚಾಲನೆ ನೀಡಲಾಯಿತು. ಮಹಿಳೆಯರು, ಪುರುಷರು ಒಬ್ಬರಿಗೊಬ್ಬರು ಪೆಟ್ಲ ಹೊಡೆದುಕೊಂಡು ತಮ್ಮ ಬಾಲ್ಯದ ಜೀವನವನ್ನು ನೆನೆಪಿಸಿಕೊಂಡರು. ಮಕ್ಕಳಿಗೆ ಗೊತ್ತೇ ಇಲ್ಲದ ಪೆಟ್ಲ ಹೊಡೆಯುವ ಆಟವನ್ನು ಆಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಎಂಬ ಕಾರ್ಯಕ್ರಮ ಕಲಶೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ರಜಿತ್ ಕೆಳಗೂರು ಪೆಟ್ಲ ಹೊಡೆಯುವುದು ಅದು ಒಂದು ಜಾನಪದ ಕಲೆ ಇಂತಹ ಕಲೆ ನಶಿಸಿ ಹೋಗಬಾರದು ಇದನ್ನು ಉಳಿಸಿಕೊಂಡು ಮುಂದಿನ ಪೀಳಿಗೆ ಪರಿಚಯಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು. ಡಾ.ಜಾನಕಿ ಸುಂದರೇಶ್ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವನ್ನು ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯ ಕೆ.ಕೆ.ಬಾಲಕೃಷ್ಣ ಭಟ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರೇಮಲತಾ, ಕಜಾಪ ಸದಸ್ಯರಾದ ಪೂರ್ಣಿಮಾ ಪ್ರಮೋದ್, ಆಶಾ ರಾಘವೇಂದ್ರ, ಗಣೇಶ್ ಕುಕ್ಕೋಡು, ಪ್ರಿಯಾ ಗುರುಪ್ರಸಾದ್, ಸುಚಿತಾ ಉದಯ್ ಇತರರು ಇದ್ದರು.