




(ಸುದೀಶ್ ಸುವರ್ಣ)
ಎಲ್ಲಿಯೋ ಬಿಸಾಡಿ ಹೋಗುವ, ಒಲೆ ಸೇರಿ ಬೂದಿಯಾಗುವ ಗೆರೆಟೆಗೆ ಕಲಾತ್ಮಕತೆಗೆ ಕೊಟ್ಟರೆ ಅದು ಹೇಗೆ ಶೋಕೇಸ್ ಸೇರುವುದೆಂದು ನಿಮಗೆ ಗೊತ್ತೆ.ಕಳಸ ಲೈವ್ ಈ ಬಗ್ಗೆ ಎಲೆಮರೆಯ ಕಾಯಿಯಂತಿದ್ದ ಕೃಷಿಕರೊಬ್ಬರ ಕಲೆಯ ಮೇಲೆ ಬೆಳಕು ಚೆಲ್ಲಿದೆ. ತೆಂಗಿನಕಾಯಿ ಗೆರೆಟೆಗೆ ಕೃಷಿಕನ ಕೈಗೆ ಸಿಕ್ಕಿದರೆ ಏನೆಲ್ಲ ಆಕರ್ಷಣೀಯ ವಸ್ತುವನ್ನಾಗಿ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ.
ಕಳಸ ಸಮೀಪದ ಹಂದಿಗೋಡು ರಾಮಚಂದ್ರ ಹೆಬ್ಬಾರ್ ಅವರ ಪುತ್ರ ಪೂರ್ಣಚಂದ್ರ ಕೃಷಿಕರಾಗಿ ಇದ್ದುಕೊಂಡು ಕಲೆಯನ್ನು ಭಿನ್ನವಾಗಿ ಚಿಂತಿಸಿ, ತನ್ನ ಕಲಾ ಪ್ರೌಢಿಮೆ ಸೇರಿಸಿ ಹಲವು ರೂಪಗಳಲ್ಲಿ ಗೆರಟೆಯನ್ನು ಆಕರ್ಷಣೀಯವಾಗಿಸಿದ್ದಾರೆ. ಗೆರೆಟೆಯನ್ನು ಬಿಸಾಡದೆ ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಪೂರ್ಣಚಂದ್ರ ಅವರು ಗೆರೆಟೆಯಲ್ಲಿ ದಿನ ಬಳಕೆ ಸೇರಿದಂತೆ ಅಲಂಕಾರಿಕಾ ವಸ್ತುಗಳನ್ನು ತಯಾರಿಸಿದ್ದಾರೆ.ತನ್ಮೂಲಕ ಮೂಲೆ ಸೇರುತ್ತಿದ್ದ ಗೆರೆಟೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.ಅವರು ಹಲವು ವರ್ಷಗಳಿಂದ ಈ ಪ್ರಯತ್ನದಲ್ಲಿ ಏನೇನು ತಯಾರಿಸಿದ್ದಾರೆ ಎನ್ನುವ ಕಂಪ್ಲೀಟ್ ಡೀಟೇಲ್ಸ್ ನ್ನು ಕಳಸ ಲೈವ್ ಇಲ್ಲಿ ತೆರೆದಿಡುತ್ತದೆ ನೋಡಿ.


ಕಲೆಗೆ ಸಾವಿಲ್ಲ, ರೋಗವಿಲ್ಲ, ಹಸಿವಿಲ್ಲ ಎನ್ನುವುದಕ್ಕೆ ಬಿಡುವಿನ ವೇಳೆಯಲ್ಲಿ ಪೂರ್ಣಚಂದ್ರರ ಕೈಯಲ್ಲಿ ರೂಪುಗೊಂಡ ಕಲಾಕೃತಿಗಳೇ ಸಾಕ್ಷಿ. ಗೆರೆಟೆಯಲ್ಲಿ ಹಾವು, ಚೇಳು, ಆಮೆ, ಏಡಿ, ದೀಪ, ಪುಂಗಿ, ಹೂವಿನ ಕುಂಡಗಳು, ಮೊಸಳೆ, ಗರುಡ, ತೆಂಗಿನ ಮರ, ಸೇರಿದಂತೆ ನಿತ್ಯ ಗೃಹಬಳಕೆಯೆ ಉಪಯೋಗಿಸುವಂತ ಸೌಟು, ಸ್ಪೂನ್, ನೀರಿನ ಜಗ್ ಸೇರಿದಂತೆ ಇನ್ನು ಹತ್ತಾರು ಬಗೆಯ ವಸ್ತುಗಳನ್ನು ತೆಂಗಿನಕಾಯಿ ಗೆರಟೆಯಿಂದ ಮಾಡಿದ್ದಾರೆ.
ಬಾಲ್ಯದಲ್ಲಿಯೇ ಕಲೆಯ ಮೇಲೆ ಒಲವು ಇದ್ದ ಪೂರ್ಣಚಂದ್ರ ಮೂಲತಃ ಕೃಷಿಕರಾಗಿರಾಗಿದ್ದೂ ತನ್ನ ದಿನ ನಿತ್ಯದ ಕೃಷಿ ಕಾರ್ಯಚಟುವಟಿಕೆ ಮುಗಿದ ನಂತರ ಬಿಡುವಿನ ವೇಳೆಯ ಸಮಯವನ್ನು ಸದ್ಬಳಕೆ ಮಾಡಿಕೊಂಡು ಬಿಸಾಡಿ ಹೋಗುವ ಒಲೆ ಸೇರಿ ಬೂದಿಯಾಗುವ ತೆಂಗಿನ ಕಾಯಿಯ ಗೆರೆಟೆಯನ್ನು ಯಾಕೆ ಸದ್ಬಳಕೆ ಮಾಡಿಕೊಳ್ಳಬಾರದು ಎಂದು ಯೋಚಿಸಿದ ಅವರು ಪ್ರಾರಂಭದಲ್ಲಿ ಸೌಟು, ಸ್ಪೂನ್ ನಂತಹ ಸಣ್ಣ ಮಟ್ಟದ ಕಲಾಕೃತಿಯನ್ನು ಮಾಡಿ ನಂತರ ಅದನ್ನೆ ಮುಂದುವರೆಸಿಕೊಂಡು ಹೋಗಿ ಈಗ ಮೊಸಳೆ, ಚೇಳುನಂಹ ಕ್ಲಿಷ್ಟಕರವಾದ ಕಲಾಕೃತಿಯನ್ನು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ.ಇದರೊಂದಿಗೆ ವಿಭಿನ್ನ ರೀತಿಯ ಟೀ ಪೈ, ಕಾಫೀ ಗಿಡದ ಬಡ್ಡೆಗಳಿಂದ ವಿವಿದ ರೀತಿಯ ಕಲಾಕೃತಿಗಳನ್ನು ಮಾಡುತ್ತಾರೆ. ಪ್ರಾರಂಭದಲ್ಲಿ ಕತ್ತಿ, ಚಾಕು, ಬ್ಲೇಡ್ಗಳನ್ನು ಬಳಸಿಕೊಂಡು ಮಾಡುತ್ತಿದ್ದ ಕಲಾಕೃತಿಗಳು ಈಗ ಸಣ್ಣ ಸಣ್ಣ ಯಂತ್ರಗಳನ್ನು ಉಪಯೋಗಿಸಿಕೊಂಡು ಗೆರೆಟೆಗೆ ಜೀವ ತುಂಬುತ್ತಿದ್ದಾರೆ.



ಹವ್ಯಾಸಕ್ಕಾಗಿ ಮಾಡುತ್ತಿದ್ದ ಕಲಾಕೃತಿಗಳು ಇದೀಗ ಮನೆ ತುಂಬಾ ನಾನಾ ಕಲಾಕೃತಿಗಳು ತುಂಬಿಕೊಂಡು ನೋಡುಗರ ಕುತೂಹಲ ಕೆರಳಿಸುತ್ತಿವೆ.ಮನೆಯ ಅಲಂಕಾರಕ್ಕೆ, ವಿವಿಧ ಸಮಾರಂಭಗಳಿಗೆ ಉಡುಗೋರೆಯಾಗಿ ನೀಡಲು ತುಂಬಾ ಉಪಕಾರಿಯಾಗಿದೆ. ಇವರ ತೆರೆಮರೆಯಲ್ಲಿರುವ ಕಲಾ ಸೇವೆಯನ್ನು ಗುರುತಿಸಿ ಇವರನ್ನು ಇತ್ತೀಚೆಗೆ ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕ ಗೌರವಿಸಿ ಪ್ರೋತ್ಸಾಹಿಸಿದ್ದಾರೆ.
ಆದರೆ ನಾನು ಇದನ್ನು ಉಧ್ಯಮವನ್ನಾಗಿ ಮಾಡುತ್ತಿಲ್ಲ.ಕೇವಲ ಹವ್ಯಾಸಕ್ಕಾಗಿ ಮಾಡುತ್ತಿದ್ದೇನೆ. ಇನ್ನೂ ಕೂಡ ವಿಶೇಷವಾದ ಕಲಾಕೃತಿಗಳನ್ನು ಮಾಡುತ್ತಿದ್ದು, ಈ ಕಲೆಯನ್ನು ನನ್ನ ಮಕ್ಕಳಾದ ವಿದ್ವತ್ಚಂದ್ರ, ವಿಕ್ಯತ್ಚಂದ್ರ, ವಿಜೇತ್ಚಂದ್ರ ರಿಗೂ ಕಳಿಸಿಕೊಡುತ್ತಿದ್ದೇನೆ.ನನ್ನ ಪತ್ನಿ ನಾಗವೇಣಿ ಕೂಡ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಅವಕಾಶ ಸಿಕ್ಕಿದರೆ ಆಸಕ್ತ ಮಕ್ಕಳಿಗೂ ಕೂಡ ಈ ಕಲೆಯನ್ನು ಕಲಿಸಿಕೊಡುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.
ಪೂರ್ಣಚಂದ್ರರವರನ್ನು ಸಂಪರ್ಕಿಸುವವರು 7019203697 ಈ ನಂ ಗೆ ಕರೆ ಮಾಡಿ