

ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಪ್ರತೀ ವರ್ಷ ನಡೆಯುವ ಸಂಪ್ರದಾಯದಂತೆ ಶುಕ್ರವಾರ ಹೊಸ ಅಕ್ಕಿ ಪೂಜೆ ನಡೆಯಿತು.
ಪ್ರತೀ ವರ್ಷ ಧನುರ್ಮಾಸ ಮಾಸದಲ್ಲಿ ಹೊಸ ಅಕ್ಕಿ ಯನ್ನು ಪೂಜಿಸಲಾಗುತ್ತದೆ. ಹೊಸ ಅಕ್ಕಿ ನೈವೇದ್ಯ ದಿನಾಂಕವನ್ನು ದೇವಸ್ಥಾನದ ಧರ್ಮಕರ್ತರು ನಿಗಧಿ ಪಡಿಸುತ್ತಾರೆ. ಧರ್ಮಕರ್ತರು ನಿಗಧಿಪಡಿಸಿದ ಜಾಗದಲ್ಲಿ ಏಳು ದಿನಗಳ ಮೊದಲು ಶ್ರೀಕ್ಷೇತ್ರದ ಪ್ರಧಾನ ಅರ್ಚಕರು ಹೋಗಿ ಆ ತೋಟದಲ್ಲಿ ಬೆಳೆದ ಬಾಳೆ ಮರಕ್ಕೆ ಪೂಜಿಸಿ ಶ್ರಿಮಾತೆಯ ಪ್ರಸಾದವನ್ನು ಆ ಬಾಳೆ ಮರಕ್ಕೆ ಹಾಕಿ ಆ ಬಾಳೆಗೊನೆಯನ್ನು ಕಡಿದು ತಂದು ಗರ್ಭಗುಡಿಯಲ್ಲಿ ಇಟ್ಟಿರುತ್ತಾರೆ. ಅದು ಸರಿಯಾಗಿ ಏಳನೇ ದಿನಕ್ಕೆ ಹಣ್ಣಾಗಿರುತ್ತದೆ. ಆ ಏಳನೆ ದಿನವೇ ಹೊಸ ಅಕ್ಕಿ ಪೂಜೆ ಮಾಡಲಾಗುತ್ತದೆ.

ಶುಕ್ರವಾರ ಶ್ರೀಕ್ಷೇತ್ರದಿಂದ ನಾಟಿ ಮಾಡಿರುವ ಭತ್ತವನ್ನು ಧರ್ಮಕರ್ತರು ತಮ್ಮ ಕುಟುಂಬ ಪರಿವಾರ ಮತ್ತು ಗ್ರಾಮಸ್ಥರು, ಭಕ್ತಾದಿಗಳು, ಕಟ್ಟಿಗೆ, ಕೋಲು, ವಾದ್ಯ, ಛತ್ರಿ ಸಹಿತ ಅರ್ಚಕರು ಹೋಗಿ ಗದ್ದೆಯಲ್ಲಿ ಬೆಳೆದಿರುವ ಭತ್ತದ ಪೈರಿಗೆ ಪೂಜೆ ಸಲ್ಲಿಸಿ ನಂತರ ತೆಗೆದ ಭತ್ತದ ತೆನೆಯನ್ನು ತಲೆಯಲ್ಲಿ ಹೊತ್ತು ತಂದು ಶ್ರೀಮಾತೆಗೆ ಸಮರ್ಪಣೆ ಮಾಡಿದರು.
ಉಳಿದಂತೆ ಕೊಯ್ದ ಭತ್ತವನ್ನು ಕುಟ್ಟಿ ಅದರಿಂದ ಅಕ್ಕಿಯನ್ನು ಭೇರ್ಪಡಿಸಿ ಅದನ್ನು ಆ ದಿನ ದೇವಿಗೆ ನೈವೇಧ್ಯ ರೂಪದಲ್ಲಿ ಸಮರ್ಪಣೆ ಮಾಡಿದರು. ಆ ಅಕ್ಕಿಯನ್ನು ಅಡಿ ಅಕ್ಕಿ ಎಂದು ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಕೊಡಲಾಯಿತು. ಸಂಜೆ ಮಂಜಿನಕಟ್ಟೆಗೆ ಶ್ರೀಮಾತೆಯನ್ನು ಪಲ್ಲಕ್ಕಿಯ ಉತ್ಸವದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ಕಟ್ಟೆಪೂಜೆ, ಮಹಾಮಂಗಳಾರತಿ ನಂತರ ಪುನಃ ವಾಪಾಸ್ಸು ಉತ್ಸವದಲ್ಲಿ ಕರೆತರಲಾಯಿತು.

