oplus_0

ಕಳಸ ಲೈವ್ ವರದಿ
ಕಳಸ ಶಿವನಗರದ ಪಾಶ್ರ್ವವಾಯು ಪೀಡಿತ ವೃದ್ಧೆ ಲಕ್ಷ್ಮಮ್ಮ ಮತ್ತು ಆಕೆಯ ಅಂಗವಿಕಲ ಮಗಳಿಗೆ ನೆರವಾಗಲೆಂದು ಅವರ ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಿಸಲು ಕಳಸ ಯುವಕ ಸಂಘ ಆರ್ಥಿಕ ನೆರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಳಸ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಿ ನಯನ ಮೋಟಮ್ಮ ಯೋಧ ರಾಜಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕಳಸ ಯುವಕ ಸಂಘ ಯೋಧ ರಾಜಪ್ಪನವರಿಗೆ ಸನ್ಮಾನ ಮಾಡಿ ೨೫ ಸಾವಿರ ನಗದನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಳಸ ಶಿವನಗರದ ಪಾಶ್ರ್ವವಾಯು ಪೀಡಿತ ವೃದ್ಧೆ ಲಕ್ಷ್ಮಮ್ಮ ಮತ್ತು ಆಕೆಯ ಅಂಗವಿಕಲ ಮಗಳಿಗೆ ನೆರವಾಗಲೆಂದು ಅವರ ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಿಸಲು ಕಳಸ ಯುವಕ ಸಂಘ ೨೦ ಸಾವಿರ ರೂಪಾಯಿ ನೆರವನ್ನು ಹಸ್ತಾಂತರ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ನಯನ ಮೋಟಮ್ಮ ‘ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕಳಸ ಯುವಕ ಸಂಘ ಮಾಡುತ್ತಿದ್ದು ನಮ್ಮನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಣೆ ಕೊಡುತ್ತಿದೆ.ಯುವಕ ಸಂಘಕ್ಕೆ ಭವಿಷ್ಯದಲ್ಲಿ ಏನಾದರೂ ನೆರವು ಬೇಕಿದ್ದರೆ ನಾನು ಸದಾ ಜೊತೆಗೆ ಇರುತ್ತೇನೆ’ ಎಂದು ಹೇಳಿದರು.
ಕಳಸ ಯುವಕ ಸಂಘದ ಕಟ್ಟಡಕ್ಕೆ ೪ ಲಕ್ಷ ರೂಪಾಯಿ ಅನುದಾನ ಕೊಟ್ಟಿರುವ ಶಾಸಕರನ್ನು ಇದೇ ಸಂದರ್ಭದಲ್ಲಿ ಯುವಕ ಸಂಘದ ಸದಸ್ಯರು ಸನ್ಮಾನಿಸಿದರು.
ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕಾರ್ಯದರ್ಶಿ ವೀರೇಂದ್ರ, ಸದಸ್ಯರಾದ ರವಿ ಕೆಳಂಗಡಿ, ವಾಸುದೇವ, ಥಾಮಸ್, ಸತ್ಯೇಂದ್ರ, ಮೆಲ್ವಿನ್, ಕೃಷ್ಣಮೂರ್ತಿ, ರಾಘವೇಂದ್ರ, ಅರುಣ, ಸದಾನಂದ, ಅನಿಲ್ ಮತ್ತಿತರರು ಭಾಗವಹಿಸಿದ್ದರು.


