ಕಳಸ ಲೈವ್ ವರದಿ
ಹೊರನಾಡಿನಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯುವ ಬಳಗದ ಆಯೋಜನೆಯಲ್ಲಿ ಇದೇ ದಿನಾಂಕ 19.04.2026 ಭಾನುವಾರದಂದು ವಿಶೇಷ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹೊರನಾಡಿನ ಬಸ್ ಪಾರ್ಕಿಂಗ್ ಮೈದಾನದಲ್ಲಿ ಅಂದು ಬೆಳಿಗ್ಗೆಯಿಂದ ‘ಎ.ಪಿ.ಎಲ್. ಪ್ರೀಮಿಯರ್ ಲೀಗ್ 2026’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಹೊರನಾಡಿನ ಸುತ್ತಮುತ್ತಲಿನ ಗ್ರಾಮಗಳಾದ ಬಲಿಗೆ, ಚಿಕ್ಕನಕೊಡುಗೆ ಹಾಗೂ ಕವನಹಳ್ಳ ಗ್ರಾಮಗಳ ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಗ್ರಾಮದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮತ್ತು ಸಾಮರಸ್ಯ ಮೂಡಿಸುವ ಸದುದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಅಂದು ರಾತ್ರಿ ಅದೇ ಸ್ಥಳದಲ್ಲಿ ಮಂಗಳೂರಿನ ಖ್ಯಾತ ‘ಬೆನಕ ಆರ್ಟ್ಸ್ ಕುಡ್ಲ’ ಕಲಾವಿದರಿಂದ ‘ಪೊರಿಪಿನ ಮಾತೆ ಜಲದುರ್ಗೆ’ ಎಂಬ ಕನ್ನಡ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಚಿತ್ರಾಪುರದ ಸತ್ಯ ಕಥಾ ಆಧಾರಿತ ಈ ನಾಟಕವು ಕನ್ನಡ ರಂಗಭೂಮಿಯಲ್ಲಿಯೇ ಮೊದಲ ಬಾರಿಗೆ ಐಇಆ ತಂತ್ರಜ್ಞಾನ ಮತ್ತು ಸಿನಿಮೀಯ ಸ್ಪರ್ಶದೊಂದಿಗೆ ಮೂಡಿಬರಲಿರುವುದು ವಿಶೇಷ.ಈ ನಾಟಕಕ್ಕೆ ಶ್ಯಾಮ್ ಕುಮಾರ್ ಚಿತ್ರಾಪುರ ಅವರ ರಚನೆ ಮತ್ತು ವಿಕ್ರಮ್ ದೇವಾಡಿಗ ಅವರ ನಿರ್ದೇಶನವಿದ್ದು, ಖ್ಯಾತ ಕಲಾವಿದರಾದ ಡಾ. ದೇವದಾಸ್ ಕಾಪಿಕಾಡ್ ಅವರ ಗಾಯನ ಸಾಹಿತ್ಯ ಹಾಗೂ ಸತೀಶ್ ಪಟ್ಲ ಅವರ ಗಾಯನವಿರಲಿದೆ.ಶ್ರೀ ಅನ್ನಪೂರ್ಣೇಶ್ವರಿ ಯುವ ಬಳಗವು ನಾಡು, ನುಡಿ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ಉದ್ದೇಶದಿಂದ ರಚನೆಯಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಳಗದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ
