
ಕಳಸ ಲೈವ್ ವರದಿ
ಇಲ್ಲಿನ ಮರಸಣಿಗೆ ಸಮೀಪದ ಯಮಗೊಂಡ ಎಸ್ಟೇಟ್ ಶನಿವಾರ ರಕ್ತಸಿಕ್ತವಾಯಿತು. ಸೌಮ್ಯ ಸ್ವಭಾವದ ಕಾಫಿ ತೋಟದ ಕಾರ್ಮಿಕ ಚೇತನ್ (೩೦) ಎಂಬುವವರು ಕಾಡುಕೋಣದ ದಾಳಿಗೆ ಬಲಿಯಾಗುವ ಮೂಲಕ ಒಂದು ಬಡ ಕುಟುಂಬದ ಆಧಾರಸ್ತಂಭವೇ ಕುಸಿದುಬಿದ್ದಿದೆ.
ಹೊರನಾಡು ಗ್ರಾಮದ ಕವನಳ್ಳ ಮೂಲದ ಚೇತನ್ ಅವರು ಮರಸಣಿಗೆಯ ಕಾಫಿ ತೋಟವೊಂದರಲ್ಲಿ ಎಂದಿನAತೆ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು. ಬಿರುಬಿಸಿಲ ಬೇಗೆಗೆ ನೀರು ಕುಡಿಯಲೆಂದು ತೋಟದ ಲೈನ್ ಮನೆಯಲ್ಲಿರುವ ತಮ್ಮ ಕೊಠಡಿಯತ್ತ ಹೆಜ್ಜೆ ಹಾಕುತ್ತಿದ್ದಾಗ, ಸಾವು ಕಾಡುಕೋಣದ ರೂಪದಲ್ಲಿ ಹೊಂಚು ಹಾಕಿತ್ತು. ಅನಿರೀಕ್ಷಿತವಾಗಿ ಎದುರಾದ ಕಾಡುಕೋಣ ಏಕಾಏಕಿ ಚೇತನ್ ಅವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ತಿವಿದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನ್ನು ತಕ್ಷಣ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಡಿಎಫ್ಒ ರವಿಶಂಕರ್, ಜಿಲ್ಲಾ ವರಿಷ್ಠಾಧಿಕಾರಿ, ಡಿವೈಎಸ್ಪಿ ಬಾಲಾಜಿ ಹಾಗೂ ಸಿಸಿಎಫ್ ಯಶಪಾಲ್ ಕ್ಷೀರ ಸಾಗರ್ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆಯ ವತಿಯಿಂದ ಮೃತರ ಕುಟುಂಬಕ್ಕೆ ೨೦ ಲಕ್ಷ ರೂಪಾಯಿಗಳ ಚೆಕ್ ವಿತರಿಸಲಾಯಿತು. ಅಲ್ಲದೆ, ಮುಂದಿನ ಐದು ವರ್ಷಗಳ ಕಾಲ ಮೃತರ ಪತ್ನಿಯ ಹೆಸರಿಗೆ ಮಾಸಿಕ ೪,೦೦೦ ರೂಪಾಯಿಗಳನ್ನು ನೀಡುವುದಾಗಿ ಡಿಎಫ್ಒ ಭರವಸೆ ನೀಡಿದರು. ತೋಟದ ಮಾಲೀಕರು ಕೂಡ ಮಾನವೀಯತೆ ಮೆರೆದು ೨ ಲಕ್ಷ ರೂಪಾಯಿಗಳ ನೆರವು ನೀಡಿದರು. ಸ್ಥಳದಲ್ಲಿ ಕಳಸ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೇಣಿಕ್ ಜೈನ್, ಮುಖಂಡರಾದ ವಿಶ್ವನಾಥ್, ಶಾಸಕರ ಆಪ್ತ ಸಹಾಯಕ ಸಂಶುದ್ಧೀನ್ ಇದ್ದರು. ಭದ್ರತೆಯ ದೃಷ್ಟಿಯಿಂದ ಕಳಸ ಆಸ್ಪತ್ರೆಯ ಆವರಣದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು.
ಈ ಸಾವಿನ ಅತ್ಯಂತ ಮನಕಲಕುವ ದೃಶ್ಯವೆಂದರೆ ಚೇತನ್ ಅವರ ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು. ಅಪ್ಪನ ಶವದ ಮುಂದೆ ನಿಂತು, ಸಾವು ಅರಿಯದ ಆ ಕಂದ ಕಣ್ಣೀರಿಟ್ಟಾಗ ನೆರೆದಿದ್ದವರ ಕಣ್ಣುಗಳು ತೇವಗೊಂಡವು. ಮನೆಯ ಯಜಮಾನನನ್ನು ಕಳೆದುಕೊಂಡ ಗರ್ಭಿಣಿ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ೨೦ ಲಕ್ಷ ರೂಪಾಯಿಯ ಚೆಕ್ ಮತ್ತು ಮಾಸಿಕ ಭತ್ಯೆಯ ಘೋಷಣೆ ಆ ಮಗುವಿಗೆ ತಂದೆಯ ಪ್ರೀತಿಯನ್ನು ತಂದುಕೊಡಬಲ್ಲದೇ? ಅಥವಾ ಆ ಗರ್ಭಿಣಿ ಮಹಿಳೆಯ ಭವಿಷ್ಯಕ್ಕೆ ಭದ್ರತೆ ನೀಡಬಲ್ಲದೇ?
ಕಾಡುಪ್ರಾಣಿಗಳು ದಾಳಿ ಮಾಡಿದಾಗ ಅರಣ್ಯ ಇಲಾಖೆ ಒಂದಷ್ಟು ಹಣ ನೀಡಿ ಕೈತೊಳೆದುಕೊಳ್ಳುವುದು ಈಗ ರೂಢಿಯಾಗಿಬಿಟ್ಟಿದೆ. ₹೨೦ ಲಕ್ಷ ಪರಿಹಾರ ನೀಡುವುದು ಇಲಾಖೆಯ ಕರ್ತವ್ಯವಿರಬಹುದು, ಆದರೆ ಜನರ ಬೇಡಿಕೆ ಇರುವುದು ಪರಿಹಾರಕ್ಕಾಗಿ ಅಲ್ಲ, ರಕ್ಷಣೆಗಾಗಿ. ಹಗಲು ಹೊತ್ತಿನಲ್ಲೇ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಓಡಾಡುತ್ತಿವೆ.

ಕಾರ್ಮಿಕರು ತೋಟಕ್ಕೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಯಾವುದೇ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ.
ಹಿಂದೆ ಇಂತಹ ಘಟನೆಗಳು ನಡೆದಾಗ ರಾಜಕೀಯ ನಾಯಕರು ದಂಡು ದಂಡಾಗಿ ಬಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದರು. ಆದರೆ ಇಂದು ಒಬ್ಬ ಬಡ ಕೂಲಿ ಕಾರ್ಮಿಕ ಮೃತಪಟ್ಟಾಗ ಜನಪ್ರತಿನಿಧಿಗಳ ಗೈರುಹಾಜರಿ ಎದ್ದು ಕಾಣುತ್ತಿದೆ. ಬಡವನ ಜೀವಕ್ಕೆ ಬೆಲೆ ಇಲ್ಲವೇ?” ಎಂಬ ಮೃತರ ಬಂಧುಗಳ ಪ್ರಶ್ನೆ ತೀಕ್ಷ್ಣವಾಗಿದೆ. ಹೋರಾಟಗಳು ಕೇವಲ ದೊಡ್ಡ ವ್ಯಕ್ತಿಗಳಿಗಾಗಿ ಮಾತ್ರ ಸೀಮಿತವೇ? ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಹೊಗೆಯಾಡುತ್ತಿದೆ.
ಕಾಡು ನಾಡು ಸಂಘರ್ಷ ಇಂದು ಮಲೆನಾಡಿನ ಶಾಪವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆ ಕೇವಲ ಅಂಕಿ ಅಂಶಗಳನ್ನು ನೀಡುವ ಬದಲು, ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಕೇವಲ ಮಾಲೀಕರ ಜವಾಬ್ದಾರಿಯಲ್ಲ, ಅದು ಸರ್ಕಾರದ ಹೊಣೆ ಕೂಡ ಹೌದು.
ಚೇತನ್ ಎಂಬ ಒಬ್ಬ ಕಾಯಕಜೀವಿ ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿದ್ದಾನೆ. ಇನ್ನು ಮುಂದಾದರೂ ಇಂತಹ ದುರಂತಗಳು ಸಂಭವಿಸದAತೆ ತಡೆಯುವುದು ನಾವು ಆತನ ಆತ್ಮಕ್ಕೆ ಸಲ್ಲಿಸುವ ನಿಜವಾದ ಗೌರವ.

