




ಕಳಸ ಲೈವ್ ವರದಿ
ಕಳೆದ ಮೂರು ದಿನಗಳ ಹಿಂದೆ ಪಿಕಪ್ ಸಹಿತ ಭದ್ರಾ ನದಿಗೆ ಬಿದ್ದ ಶಮಂತನ ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಡ ನಡೆಸುತ್ತಿದ್ದರೆ ಇನ್ನೊಂದೆಡೆ ಶಮಂತನ ಪ್ರೀತಿಯ ನಾಯಿ ಕಳೆದ ಮೂರು ದಿನಗಳಿಂದ ಅನ್ನ ನೀರು ಬಿಟ್ಟು ಶಮಂತನ ಬರುವಿಕೆಗಾಗಿ ಕಾಯುತ್ತಿರುವುದು ಎಂತವರ ಕಣ್ಣಲ್ಲಿ ನೀರು ತರಿಸುತ್ತದೆ.
ಶಮಂತನ ಕಳೆದುಕೊಂಡ ತಾಯಿ ದುಃಖದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮನೆಯಲ್ಲಿ ಶಮಂತನ ಅಣ್ಣ ಹಾಗೂ ಅಪ್ಪ ದಿಕ್ಕೇ ತೋಚದಂತೆ ಕುಳಿತಿದ್ದಾರೆ.ಆದರೆ ಇದೆಲ್ಲದರ ಮಧ್ಯೆ ಇವರ ಮನೆಯಲ್ಲಿರುವ ನಾಯಿ ಮನೆಯ ಮೆಟ್ಟಿಲಲ್ಲಿ ಕುಳಿತುಕೊಂಡು ಕಣ್ಣೀರಿಡುತ್ತಿದೆ.
ಶಮಂತ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಹೊಟೆಲೊಂದಕ್ಕೆ ಕೆಲಸಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿ ಅಲ್ಲಿಂದ ಬರುವಾಗ ತಾನು ಸಾಕಿದ ನಾಯಿಗೆ ಆಹಾರ ತಂದು ಹಾಕುವುದನ್ನು ರೂಢಿ ಮಾಡಿಕೊಂಡಿದ್ದ. ಶಮಂತ ಅಂದರೆ ಈ ನಾಯಿಗೆ ಅಚ್ಚು ಮೆಚ್ಚು, ಈತನ ಬರುವಿಕೆಗಾಗಿ ಪ್ರತೀ ದಿನ ಕಾಯುತ್ತಿತ್ತು.ಆತ ಬಂದ ಕೂಡಲೇ ಆತ ಕೊಟ್ಟ ತಿಂಡಿಯನ್ನು ತಿಂದು ಆನತ ಮೈ ಕೈ ನೆಕ್ಕಿ ಮುದ್ದಿಸುತ್ತಿತ್ತು.
ಇದೀಗ ಶಮಂತ ಇಲ್ಲವಾಗಿದ್ದಾನೆ.ಆದರೆ ಆತನ ನಾಯಿ ಮಾತ್ರ ಶಮಂತನಿಗಾಗಿ ಕಾಯುತ್ತಿದೆ. ಶಮಂತ ಕಾಣೆಯಾದ ಮೇಲೆ ಕಳೆದ ಮೂರು ದಿನದಿಂದ ಒಂದು ತೊಟ್ಟು ನೀರು ಕೂಡ ಮುಟ್ಟದೆ ಶಮಂತನಿಗಾಗಿ ಕಣ್ಣೀರು ಹಾಕುತ್ತಿದೆ.ಮನೆಗೆ ಬಂದವರ ಮುಖ ನೋಡಿ ಆ ಕಡೆ ಈ ಕಡೆ ಹೋಗಿ ಬಂದು ಮತ್ತೆ ಮನೆ ಬಾಗಿಲಲ್ಲೆ ಕಾಯುತ್ತಿದೆ. ಏನೇ ಕೊಟ್ಟರೂ ತಿನ್ನದೆ ತನ್ನ ಮೂಖ ವೇದನೆ ತೋರಿಸುತ್ತಿದೆ.
