



ಕಳಸ ಲೈವ್ ವರದಿ
ಭದ್ರಾ ನದಿಗೆ ಪಿಕ್ ಅಪ್ ಬಿದ್ದು ಮಗ ಕಣ್ಮರೆಯಾದ ದುಃಖ ಸಹಿಸದೆ ಆತನ ಮೃತದೇಹ ಸಿಗುವ ಮುನ್ನವೇ ಆತನ ತಾಯಿ ಕೂಡ ಗುರುವಾರ ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು, ಮಗನ ಮೃತ ದೇಹ ಸಿಗುವ ಮುನ್ನವೇ ತಾಯಿ ಅಗ್ನಿಯಲ್ಲಿ ಲೀನವಾಗಿ ಹೋದರು.
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ರವಿಕಲಾ ತನ್ನ ಮಗ ಶಮಂತನ ಮೇಲೆ ಸಾಕಷ್ಟು ಕನಸನ್ನು ಕಟ್ಟಿಕೊಂಡಿದ್ದರು. ತಾನೂ ಕೂಲಿ ಮಾಡಿ ತನ್ನ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೂಡ ಕೊಡಿಸಿದ್ದರು. ಅದರಂತೆ ಒಬ್ಬ ಮಗ ಉದ್ಯೋಗವನ್ನು ಮಾಡಿಕೊಂಡಿದ್ದರು.ಶಮAತ ಕಳಸ ಪ್ರಥಮ ಧರ್ಜೆ ಕಾಲೇಜಿನಲ್ಲಿ ತನ್ನ ವಿದ್ಯಾಬ್ಯಾಸ ಮುಗಿಯುತ್ತಿದ್ದಂತೆ ತಾಯಿ ತನ್ನ ಮಗನಿಗಾಗಿ ಆರು ತಿಂಗಳ ಹಿಂದೆಯಷ್ಟೆ ಒಂದು ಪಿಕಪ್ ವಾಹನವನ್ನು ತೆಗೆಸಿಕೊಟ್ಟಿದ್ದರು.
ಕಾಲೇಜಿನಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಶಮಂತ ತನ್ನ ವೃತ್ತಿಯಲ್ಲೂ ತನ್ನ ಬದ್ಧತೆಯನ್ನು ಕಾಪಾಡಿಕೊಂಡು ಸಾರ್ವಜನಿಕವಾಗಿಯೂ ಉತ್ತಮ ಹೆಸರನ್ನು ಪಡೆದುಕೊಂಡು, ತನ್ನ ಪೋಷಕರೊಂದಿಗೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುವ ಹೆಜ್ಜೆಯನ್ನು ಇಡುತ್ತಿದ್ದ.
ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕಳಸ-ಕಳಕೋಡು ರಸ್ತೆಯ ಕೊಳಮಗೆಯಲ್ಲಿ ರಸ್ತೆ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಶಮಂತ್ (೨೨) ಓಡಿಸುತ್ತಿದ್ದ ಪಿಕ್ ಅಪ್ ವಾಹನ ಗುರುವಾರ ಮಧ್ಯಾಹ್ನ ೩ ಗಂಟೆ ವೇಳೆಗೆ ಉರುಳಿ ಬಿದ್ದು ಕಣ್ಮರೆಯಾಗಿದ್ದ.
ಸುದ್ಧಿ ತಿಳಿಯುತ್ತಿದ್ದಂತೆ ಮಗನ ಮೇಲೆ ಸಾಕಷ್ಟು ಕನಸನ್ನು ಕಟ್ಟಿಕೊಂಡಿದ್ದ ತಾಯಿ ರವಿಕಲಾ ಆಘಾತಗೊಂಡಿದ್ದರು.ಮಗ ಬಿದ್ದ ಸ್ಥಳಕ್ಕೆ ಓಡೋಡಿ ಬಂದು ಗೋಳಾಡಿದರು. ಅವರನ್ನು ಒತ್ತಾಯ ಪೂರ್ವಕವಾಗಿ ಮನೆಗೆ ಕರೆದೊಯ್ಯಲಾಯಿತು. ಸಾಕಷ್ಟು ಆಸೆ, ಕನಸನ್ನು ಕಟ್ಟಿಕೊಂಡು ತನ್ನ ಎದೆಯೆತ್ತರೆಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ತಾಯಿ ಮನೆಗೆ ಬಂದವರೆ ರಾತ್ರಿ ೧೦.೩೦ರ ವೇಳೆಗೆ ತಮ್ಮ ಮನೆಯ ಸಮೀಪದ ಕೆರೆಗೆ ಹಾರಿ ತನ್ನ ಬದುಕಿನ ಪಯಣವನ್ನೆ ಮುಗಿಸಿದರು.
ಶುಕ್ರವಾರ ಒಂದೆಡೆ ತನ್ನ ಮಗನ ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿತ್ತು. ಇತ್ತ ಶಮಂತನ ಮೃತದೇಹಕ್ಕಾಗಿ ಎಷ್ಟೇ ಹುಡುಕಾಟ ನಡೆಸಿದರೂ ಕೂಡ ಪತ್ತೆಯಾಗದ ಹಿನ್ನಲೆಯಲ್ಲಿ ಮಗನ ಮೃತ ದೇಹ ಸಿಗುವ ಮೊದಲೇ ಕಳಸದ ಹಿಂದೂ ರುದ್ರ ಭೂಮಿಯಲ್ಲಿ ತಾಯಿ ಅಗ್ನಿಯಲ್ಲಿ ಲೀನವಾಗಿ ಹೋದರು.
ನೆರೆದಿದ್ದ ಬಂಧು ಮಿತ್ರರು ಕಟುಂಬಸ್ಥರು ಹಾಗೂ ನೂರಾರು ಸಾರ್ವಜನಿಕರು ಕಂಬನಿಯ ವಿಧಾಯ ಹೇಳಿದರು.

