ಕಳಸ ಲೈವ್ ವರದಿ
ತಾಲ್ಲೂಕಿನ ಹೆಸರಾಂತ ನಾಟಿ ವೈದ್ಯರಾದ ಗುತ್ತೆಡ್ಕ ನಾಗಪ್ಪ ಗೌಡರು (79) ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ
ಗುತ್ತೆಡ್ಕ ಎಂಬಲ್ಲಿ ದಿವಂಗತ ಶ್ರೀ ತಿಮ್ಮೇಗೌಡ ಮತ್ತು ಶ್ರೀಮತಿ ಗೌರಮ್ಮ ಎಂಬ ದಂಪತಿಗಳ ಪುತ್ರರಾಗಿ 1946ನೇ ಜೂನ್ ತಿಂಗಳಿನಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ನಾಟಿ ಔಷಧೀಯ ವಿಷಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅಂದಿನಿಂದ ಇಲ್ಲಿಯ ತನಕ ನಿರಂತರ ತಮ್ಮ ಗಿಡಮೂಲಿಕೆ ಔಷಧಿಗಳ ಮೂಲಕ ಜನಸಾಮಾನ್ಯರ ನಾನ ಕಾಯಿಲೆಗಳಾದ ಸರ್ಪ ಸುತ್ತು, ಜಾಂಡಿಸ್, ಬಾವು, ಚರ್ಮರೋಗ ಮುಂತಾದ ಕಾಯಿಲೆಗಳಿಗೆ ಔಷಧಿಯನ್ನು ನೀಡಿ ಗುಣಪಡಿಸಿಕೊಂಡು ಬಂದಿದ್ದಾರೆ.
ವಿಶೇಷವಾಗಿ ಹಾವು ಕಡಿತಕ್ಕೆ ಒಳಗಾದ ನೂರಾರು ಜನರಿಗೆ ಸಕಾಲದಲ್ಲಿ ನಾಟಿ ಔಷಧಿಯನ್ನು ನೀಡಿ ಅವರ ಪ್ರಾಣವನ್ನು ಕಾಪಾಡಿದ್ದಾರೆ.
ಅಲ್ಲದೆ ಜಾನುವಾರುಗಳ ವಿವಿಧ ಕಾಯಿಲೆಗಳಿಗೆ ಔಷಧಿ ನೀಡುತಿದ್ದರು.
ಇವರು ವ್ಯವಸಾಯ ಕ್ಷೇತ್ರ ಮತ್ತು ನಾಟಿವೈದ್ಯ ಪ್ರವೀಣರಲ್ಲದೆ ಇವರು ಉತ್ತಮ ಕಲಾವಿದರು ಕೂಡ ಹೌದು. ಜಾನಪದ, ಕಲೆ,ಯಕ್ಷಗಾನ, ತಾಳಮದ್ದಲೆ, ಅರ್ಥಗಾರಿಕೆಯಲ್ಲಿ ಕೂಡ ಪಾತ್ರ ಪ್ರಾವೀಣ್ಯತೆ ಹೊಂದಿದ್ದರು, ಅನೇಕ ಶಿಷ್ಯರನ್ನು ಸಮಾಜಕ್ಕೆ ನೀಡಿದ ಖ್ಯಾತಿ ಇವರದಾಗಿತ್ತು.
ಹಳ್ಳಿಗಾಡು ಪ್ರದೇಶವಾದ ಸಂಸೆಯ ಗುತ್ತೇಡ್ಕದಲ್ಲಿ ವಾಸವಾಗಿದ್ದು ಇವರು ಕೇವಲ ದೂರವಾಣಿ ಕರೆಗೆ ಸ್ಪಂದಿಸಿ ಕಷ್ಟ ಎಂದವರ ಮನೆಗೆ ಕೂಡಲೇ ಆಗಮಿಸಿ ಔಷದೋಪಚಾರವನ್ನು ನೀಡಿದ ಇವರು ಸಹೃದಯಿ ಆಗಿದ್ದರು ಇವರ ಸೇವಾ ಮನೋಭಾವನೆಯನ್ನು ಕಂಡ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿರುವುದು ಹೆಮ್ಮೆಯ ವಿಷಯ ಮತ್ತು ಇವರು ನೀಡಿದ ಸೇವೆಗೆ ಹಿಡಿದ ಕೈಗಡಿಯಾಗಿರುತ್ತದೆ.
ಆದರೆ ಇಂದು ಮುಂಜಾನೆ 6:30ಕ್ಕೆ ತಮ್ಮ 79 ವರ್ಷ ಸುದೀರ್ಘ ಪಯಣವನ್ನು ಮುಗಿಸಿ ಇಹಲೋಕ ತ್ಯಜಿಸಿರುವುದು ಸಮಾಜಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.
