
ಕಳಸ ಲೈವ್ ವರದಿ
ಅಕಸ್ಮಿಕ ವಿದ್ಯುತ್ ಅವಘಡದಲ್ಲಿ ಕಳಸ ಪಟ್ಟಣದ ವಿದ್ಯುತ್ ಗುತ್ತಿಗೆದಾರ ಮಹಮ್ಮದ್ ಇಸ್ಮಾಯಿಲ್ (42) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ಕಳಸದ ಕರಿಮನೆೆ ಎಂಬಲ್ಲಿ ನಡೆದಿದೆ.
ಗುಡುಗು ಸಿಡಿಲು ಹಾಗೂ ಭಾರೀ ಮಳೆ ನಡುವೆ ಕರಿಮನೆ ಎಸ್ಟೇಟ್ನ ಜಮೀನಿನಲ್ಲಿರುವ ಕೂಲಿ ಲೈನ್ ಗೆ ವಿದ್ಯುತ್ ಸಂಪರ್ಕ ಅಳವಡಿಸುವಾಗ ವಿದ್ಯುತ್ ಸ್ಪರ್ಶವಾಗಿದೆ.ಕೂಡಲೇ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.ಆದರೆ ಅಷ್ಟೋತ್ತಿಗಾಗಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಕಳಸ ಮೂಲದವರಾದ ಇಸ್ಮಾಯಿಲ್ ಅವರ ಪೋಷಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು, ಇಸ್ಮಾಯಿಲ್ ಕಳಸದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಹಾಗೂ ಪುಟ್ಟ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಕಳೆದ ಎರಡು ದಶಕಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಮೂಡಿಗೆರೆ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇಸ್ಮಾಯಿಲ್, ಸೌಮ್ಯ ಸ್ವಭಾವ ಮತ್ತು ಸಹೃದಯಿ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇಸ್ಮಾಯಿಲ್ ಅವರ ಅಕಾಲಿಕ ಅಗಲಿಕೆ ಕಳಸ ಭಾಗದಲ್ಲಿ ಆಘಾತ ಉಂಟುಮಾಡಿದೆ. ಸ್ಥಳೀಯ ಜನರು, ವಿದ್ಯುತ್ ಗುತ್ತಿಗೆದಾರರು, ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಚಿಕ್ಕಮಗಳೂರಿನಲ್ಲಿ ಬುಧವಾರ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ಪೋಷಕರು, ಪತ್ನಿ ಹಾಗೂ ಚಿಕ್ಕ ಮಗುವನ್ನು ಅಗಲಿದ್ದಾರೆ.
ಸೇವೆಯ ಮಧ್ಯೆ ಜೀವ ತ್ಯಾಗ ಮಾಡಿದ ಇಸ್ಮಾಯಿಲ್ ಅವರ ನೆನಪು ಕಳಸ ಭಾಗದಲ್ಲಿ ಇನ್ನೂ ದೀರ್ಘಕಾಲ ಮನಸ್ಸು ಕಾಡಲಿದೆ.
“ವಿದ್ಯುತ್ ಸೇವೆಯೇ ಜೀವನವಾಗಿದ್ದ ಇಸ್ಮಾಯಿಲ್, ಅದೇ ಸೇವೆಯ ಮಧ್ಯೆ ಜೀವ ಕಳೆದುಕೊಂಡರು” ಎಂಬ ಮಾತುಗಳು ಕಳಸದ ಜನರ ಕಣ್ಣೀರಿನಲ್ಲಿ ಮೂಡಿವೆ.