
ಕಳಸ ಲೈವ್ ವರದಿ
ತಾಲ್ಲೂಕಿನ ಪ್ರಮುಖ ಮತ್ತು ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಶಿಥಿಲಗೊಂಡಿರುವುದು, ಸೇತುವೆ ಕಾಮಗಾರಿಗಳ ವಿಳಂಬ ಮತ್ತು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣದಲ್ಲಿ ಸರ್ಕಾರದ ವಿಫಲತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊoಡು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತಾಲ್ಲೂಕು ಘಟಕವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸಮಸ್ಯೆಗಳನ್ನು ಕೂಡಲೇ ಸರಿಪಡಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಶ್ರೀಕಾಂತ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಹೇಶ್, ತಾಲ್ಲೂಕಿನ ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಷ್ಟು ಹದಗೆಟ್ಟಿದ್ದು, ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ಸೇತುವೆಗಳು ಮತ್ತು ರಸ್ತೆ ಕಾಮಗಾರಿಗಳಿಗಾಗಿ ಗುದ್ದಲಿ ಪೂಜೆ ನೆರವೇರಿಸಿದ್ದರೂ, ಇದುವರೆಗೂ ಯಾವುದೇ ಕೆಲಸ ಕಾರ್ಯಗಳು ಪ್ರಾರಂಭವಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದಿಂದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ.
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿoದ ಬಿಡುಗಡೆಯಾದ ಅನುದಾನವು ಸರಿಯಾಗಿ ಬಳಕೆಯಾಗದೆ, ಜನರ ಅಗತ್ಯತೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಮತ್ತು ಸರ್ಕಾರ ವಿಫಲವಾಗಿದ್ದು, ರೈತರ ಬೆಳೆಗಳಿಗೆ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಿದೆ.
ಸರ್ಕಾರದ ಜಾತಿ ಗಣತಿಯ ಪ್ರಕ್ರಿಯೆಯಿಂದಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗೊಂದಲ ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಈ ಗಣತಿಯನ್ನು ಸರ್ಕಾರ ಕೂಡಲೇ ಪರಿಶೀಲಿಸಬೇಕು ಎಂದು ಆಗ್ರಹಿಸಿದ ಅವರು ತಾಲ್ಲೂಕಿನ ಜನರ ಮೂಲಭೂತ ಅವಶ್ಯಕತೆಗಳಾದ ರಸ್ತೆ, ಸೇತುವೆ ಮತ್ತು ಕಾಡು ಪ್ರಾಣಿಗಳ ನಿಯಂತ್ರಣದoತಹ ಸಮಸ್ಯೆಗಳ ಕುರಿತು ಸರ್ಕಾರವು ತಕ್ಷಣವೇ ಗಮನ ಹರಿಸಬೇಕು. ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸರಿಪಡಿಸದಿದ್ದರೆ, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುಂದರ ಶೆಟ್ಟಿ, ಸುಜಯ ಸದಾನಂದ, ರವಿ ಹೆಮ್ಮಕ್ಕಿ, ನಾಗೇಶ್ ಭಟ್ ಇತರರು ಇದ್ದರು.