
ಕಳಸ ಲೈವ್ ವರದಿ
ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಳಸ ಜೆಇಎಂ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಾಲೆಯ 10ನೇ ತರಗತಿಯ ವಿಧುಷಾ ಜೈನ್ 3000 ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.. ಅದೇ ತರಗತಿಯ ಮಹಮ್ಮದ್ ಸಲ್ಮಾನುಲ್ ಫಾರಿಸ್ 5000 ಮೀ. ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರಮಟ್ಟದ ಈ ಕ್ರೀಡಾಕೂಟ ಇದೇ ತಿಂಗಳ 12ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿದ್ದು, ವಿಧುಷಾ ಜೈನ್ ಹಾಗೂ ಫಾರಿಸ್ ಪ್ರತಿನಿಧಿಸಲಿದ್ದಾರೆ.
ವಿಧುಷಾ ಜೈನ್ ಕಳಸ ಕೆಳಂಗಡಿ ವೀಣಾ–ಸತ್ಯೇಂದ್ರ ಜೈನ್ ದಂಪತಿಯ ಪುತ್ರಿ. ಮಹಮ್ಮದ್ ಸಲ್ಮಾನುಲ್ ಫಾರಿಸ್ ಸಂಸೆಯ ಫಾರುಕ್–ಅಭಿಬಾ ದಂಪತಿಯ ಪುತ್ರ. ಶಾಲೆಯ ಶಿಕ್ಷಕ ಪ್ರಶಾಂತ್ ಅವರ ನಿಷ್ಠಾವಂತ ತರಬೇತಿಯಲ್ಲಿ ಬೆಳೆದ ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರ ವೃಂದ ಹಾಗೂ ಕಳಸದ ಜನತೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಕಳಸದ ಭವಿಷ್ಯ ಕ್ರೀಡಾಕ್ಷೇತ್ರದಲ್ಲಿ ಹೊಸ ಬೆಳಕನ್ನು ಕಾಣಿಸಿದೆ.
