
ಕಳಸ ಲೈವ್ ವರದಿ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಹಿರೇಬೈಲು ಇದರ ವಿದ್ಯಾರ್ಥಿ ಮಹಮದ್ ಶಾಜ್ ಪ್ರಥಮ ಸ್ಥಾನ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ಮಹಮದ್ ಶಾಜ್, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರ ಸಾಧನೆಯಿಂದಾಗಿ, ಇದೇ ತಿಂಗಳ 12ನೇ ತಾರೀಕು ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ಪ್ರತಿಷ್ಠಿತ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಮಹಮದ್ ಶಾಜ್ ಅವರು ಆದಂ ಮತ್ತು ಸೈದಾ ದಂಪತಿಯ ಪುತ್ರರಾಗಿದ್ದಾರೆ. ಇವರ ಈ ಮಹತ್ತರ ಸಾಧನೆಯ ಹಿಂದೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶಿಕ್ಷಕ ಅಭಿನಂದ ಅವರ ತರಬೇತಿ ಮತ್ತು ಮಾರ್ಗದರ್ಶನವಿದೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿಯೂ ಶಾಜ್ ಯಶಸ್ಸು ಗಳಿಸಲೆಂದು ಶುಭ ಹಾರೈಸಿದ್ದಾರೆ.
