

ಕಳಸ ಲೈವ್ ವರದಿ
ಲೋಕಪಾವನಿ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಾರ್ಗಶಿರ ಬಹುಳ ಚತುರ್ದಶಿಯ ಪುಣ್ಯದಿನವಾದ ಗುರುವಾರ ಶ್ರೀಮಾತೆಗೆ ಈ ಸಾಲಿನ ಹೊಸ ಅಕ್ಕಿಯ ನೈವೇದ್ಯವನ್ನು ಅರ್ಪಿಸಲಾಯಿತು.
ಬೆಳಗಿನ ಮಂಗಳಾರತಿಯ ನಂತರ ಶ್ರೀಕ್ಷೇತ್ರಕ್ಕೆ ಸೇರಿದ ಹವಿ ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಭತ್ತದ ಪೈರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಕ್ಷೇತ್ರದ ಧರ್ಮಕರ್ತರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಒಗ್ಗೂಡಿ ಭಕ್ತಿಭಾವದಿಂದ ಪೈರನ್ನು ಕುಯಿಲು ಮಾಡಿದರು. ಕಟಾವು ಮಾಡಿದ ಪೈರನ್ನು ಮೆರವಣಿಗೆಯ ಮೂಲಕ ತಂದು ಶ್ರೀಮಾತೆಗೆ ಸಮರ್ಪಿಸಲಾಯಿತು.
ನಂತರ ಸಂಪ್ರದಾಯದAತೆ ಭತ್ತವನ್ನು ಕುಟ್ಟಿ ಬೇರ್ಪಡಿಸಿದ ಹೊಸ ಅಕ್ಕಿಯನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಯಿತು. ಈ ಪವಿತ್ರವಾದ ಅಕ್ಕಿಯನ್ನು ‘ಅಡಿಅಕ್ಕಿ’ ಎಂಬ ಹೆಸರಿನಲ್ಲಿ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಪ್ರಸಾದವಾಗಿ ವಿತರಿಸಲಾಯಿತು.
ಸಾಯಂಕಾಲ ಶ್ರೀ ಅನ್ನಪೂರ್ಣೇಶ್ವರಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿಗಳೊಂದಿಗೆ ಮಂಜಿನಕಟ್ಟೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸಾಂಪ್ರದಾಯಿಕ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿದ ಬಳಿಕ, ದೇವಿಯನ್ನು ಪುನಃ ಮಂದಿರಕ್ಕೆ ಕರೆತರಲಾಯಿತು. ಹಬ್ಬದ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
