ಕಳಸ ಲೈವ್ ವರದಿ
ಧಾರವಾಡದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಸ್ಥಳೀಯ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್) ಕಳಸ ಶಾಲೆಯ ವಿದ್ಯಾರ್ಥಿ ಶಿವಾನಂದ್ ಅದ್ಭುತ ಸಾಧನೆ ಮಾಡಿದ್ದಾರೆ. ತನ್ನ ವಿನೂತನ ವಿಜ್ಞಾನ ಮಾದರಿಯ ಮೂಲಕ ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರನಾಗಿರುವ ಇವರು, ಇದೀಗ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳಕ್ಕೆ (South India Zonal Level) ಆಯ್ಕೆಯಾಗುವ ಮೂಲಕ ಶಾಲೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಶಿಕ್ಷಕ ಸಂದೇಶ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಈ ಮಾದರಿಯು ರಾಜ್ಯ ಹಂತದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಇದರ ಫಲವಾಗಿ, ಇದೇ ತಿಂಗಳ ಜನವರಿ 19 ರಿಂದ 23 ರವರೆಗೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಶಿವಾನಂದ್ ಭಾಗವಹಿಸಿ ತನ್ನ ಮಾದರಿಯನ್ನು ಪ್ರದರ್ಶಿಸಲಿದ್ದಾರೆ.
ಸಾಧಕ ವಿದ್ಯಾರ್ಥಿ ಶಿವಾನಂದ್ ಕೆ.ಪಿ.ಎಸ್. ಕಳಸದ ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಯಶೋದಮ್ಮ ಹಾಗೂ ಶ್ರೀ ರೇವಣಸಿದ್ದಪ್ಪ ದಂಪತಿಗಳ ಪುತ್ರನಾಗಿದ್ದಾರೆ. ಮಗನ ಈ ಸಾಧನೆಗೆ ಪೋಷಕರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಶಿವಾನಂದ್ನ ಈ ಮಹೋನ್ನತ ಸಾಧನೆಗೆ ಶಾಲೆಯ ಉಪ ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ (SDMC) ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆಯುವ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲೂ ಶಿವಾನಂದ್ ಯಶಸ್ಸು ಸಾಧಿಸಲಿ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.
