ಕಳಸ ಲೈವ್ ವರದಿ
“ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಅರಣ್ಯ ಇಲಾಖೆ ಕಬಳಿಸಲು ಹವಣಿಸುತ್ತಿದೆ” ಎಂದು ಕಿಡಿಕಾರಿರುವ ಕಳಸ ತಾಲ್ಲೂಕಿನ ರೈತರು ಮತ್ತು ಕಾರ್ಮಿಕರು, ಇಲಾಖೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೀದಿಗಿಳಿಯಲು ನಿರ್ಧರಿಸಿದ್ದಾರೆ. ಬರುವ ಸೋಮವಾರ (ಜ. 12) ಕಳಸದಲ್ಲಿ ಕಳಸ ರೈತ ಕಾರ್ಮಿಕರ ಹಿತರಕ್ಷಣಾ ಸಮಿತಿಯು ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ‘ಅಸ್ತಿತ್ವದ ಹೋರಾಟ’ ನಡೆಸಲಿದ್ದಾರೆ.
ಕಳಸ ತಾಲ್ಲೂಕಿನ ಕಳಕೋಡು, ಹೊರನಾಡು, ಹಿರೇಬೈಲು ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯು ‘ಮೀಸಲು ಅರಣ್ಯ’ ಎಂದು ಘೋಷಿಸಲು ಮುಂದಾಗಿದೆ. ಇದರಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತರು ಮತ್ತು ನಿವೇಶನ ರಹಿತ ಬಡವರು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ.
ಕಂದಾಯ ಭೂಮಿ ಕಬಳಿಕೆ: ಕಳಕೋಡು ಮತ್ತು ಹೊರನಾಡು ಗ್ರಾಮಗಳ ಸುಮಾರು 1850 ಎಕರೆಗೂ ಅಧಿಕ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಫಾರಂ 50, 53, 57 ಮತ್ತು 94ಅ ಅಡಿಯಲ್ಲಿ ಸಲ್ಲಿಕೆಯಾದ ಸಾವಿರಾರು ಅರ್ಜಿಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದ ಕಾರಣ ನೀಡಿ ತಿರಸ್ಕರಿಸಲಾಗುತ್ತಿದೆ.
2018ರಿಂದೀಚೆಗೆ ಭೂಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎಂಬ SIಖಿ ವರದಿಯಿಂದಾಗಿ ಅರ್ಹ ಫಲಾನುಭವಿಗಳ ಹಕ್ಕು ಪತ್ರಗಳೂ ರದ್ದಾಗುವ ಭೀತಿ ಎದುರಾಗಿದೆ.
ಪಹಣಿಯಲ್ಲಿರುವ ಗೋಮಾಳ ಮತ್ತು ಕಂದಾಯ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ಎಂದು ಘೋಷಿಸಬಾರದು. ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಮೀಸಲಿಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ವಿಸ್ತರಿಸಬೇಕು. ಅಭಿವೃದ್ಧಿ ಕೆಲಸಗಳಿಗೆ (ರಸ್ತೆ, ವಿದ್ಯುತ್) ಅರಣ್ಯ ಇಲಾಖೆ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
“ನಮ್ಮ ಅಸ್ತಿತ್ವ ಮತ್ತು ಭೂಮಿಯ ರಕ್ಷಣೆಗಾಗಿ ಈ ಹೋರಾಟ ಅನಿವಾರ್ಯವಾಗಿದೆ. ತಾಲ್ಲೂಕಿನ ಎಲ್ಲಾ ರೈತರು, ಕಾರ್ಮಿಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು,” ಎಂದು ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಭಟ್, ವಾಸು ಕೆ.ಎಲ್., ನವೀನ್ ಗೌಡ ಹಾಗೂ ಇತರರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ
ಪ್ರತಿಭಟನೆಯ ವಿವರ:
ದಿನಾಂಕ: 12/01/2026, ಸೋಮವಾರ, ಸಮಯ: ಬೆಳಿಗ್ಗೆ 11 ಗಂಟೆಗೆ
ಸ್ಥಳ: ಕಳಸೇಶ್ವರ ದೇವಸ್ಥಾನದ ಆವರಣದಿಂದ ಅರಣ್ಯ ಇಲಾಖೆಯ ಕಚೇರಿಯವರೆಗೆ ಮೆರವಣಿಗೆ.
