
ಕಳಸ ಲೈವ್ ವರದಿ
ಇಲ್ಲಿನ ಸಂಸೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಸಂಸ್ಥೆಯಲ್ಲಿ ಬೆಂಗಳೂರಿನ ಟೊಯೋಟಾ ಕಂಪನಿಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ವಿಶೇಷ ‘ಕ್ಯಾಂಪಸ್ ಕನೆಕ್ಟ್’ ತರಬೇತಿ ಕಾರ್ಯಕ್ರಮ ನಡೆಯಿತು.
ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಕೈಗಾರಿಕೆಗಳ ನೇರ ಸಂಪರ್ಕ ಪಡೆಯಲು ಮತ್ತು ಉದ್ಯೋಗ ಮಾರುಕಟ್ಟೆಗೆ ಸಿದ್ಧರಾಗಲು ‘ಕ್ಯಾಂಪಸ್ ಕನೆಕ್ಟ್’ ಒಂದು ಪ್ರಮುಖ ಕೊಂಡಿಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯಮದ ಜ್ಞಾನ ,, ಸಂವಹನ ಕೌಶಲ್ಯ, ವೃತ್ತಿಪರ ನಡವಳಿಕೆ ಹಾಗೂ ಶಿಕ್ಷಣ ಮುಗಿಯುವ ಮುನ್ನವೇ ನೇರ ನೇಮಕಾತಿ , ಮೂಲಕ ಉದ್ಯೋಗ ದೊರಕಿಸಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಟೊಯೋಟಾ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀ ರಾಘವೇಂದ್ರ ಅವರು, “ಟೊಯೋಟಾ ಸಂಸ್ಥೆಯು ಐಟಿಐಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದರಿAದ ವಿದ್ಯಾರ್ಥಿಗಳಿಗೆ ಹಳೆಯ ಯಂತ್ರಗಳ ಬದಲಿಗೆ ಅತ್ಯಾಧುನಿಕ ‘ರೋಬೋಟಿಕ್ಸ್’ ಮತ್ತು ‘ಸಿಎನ್ಸಿ’ ಯಂತ್ರಗಳ ಮೇಲೆ ತರಬೇತಿ ಪಡೆಯಲು ಅವಕಾಶ ಸಿಗುತ್ತಿದೆ,” ಎಂದರು. ಅಲ್ಲದೆ, “ಎಸ್ಡಿಎಂ ಐಟಿಐ ಕರ್ನಾಟಕದಲ್ಲೇ ಅತ್ಯಂತ ಶಿಸ್ತುಬದ್ಧ ಮತ್ತು ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಸರಾಗಿದೆ. ನಾವು ರಾಜ್ಯದ ಅನೇಕ ಕಾಲೇಜುಗಳಿಗೆ ಭೇಟಿ ನೀಡಿದ್ದು, ಈ ಸಂಸ್ಥೆಯ ಶಿಸ್ತು ಮತ್ತು ಶಿಕ್ಷಣದ ಗುಣಮಟ್ಟ ಶ್ರೇಷ್ಠವಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಮಾರ್ಟ್ ತಂತ್ರಜ್ಞರಾಗಲು ಕರೆ: ಟೊಯೋಟಾ ಕಂಪನಿಯ ಡೆಪ್ಯುಟಿ ಮ್ಯಾನೇಜರ್ ಶ್ರೀ ಬೀರೇಶ್ ಕಾಂಬ್ಳಿ ಮಾತನಾಡಿ, “ಐಟಿಐ ಶಿಕ್ಷಣವು ಇಂದು ಕೇವಲ ಶ್ರಮಜೀವಿಗಳ ತಯಾರಿಕಾ ಕೇಂದ್ರವಲ್ಲ, ಅದು ‘ಸ್ಮಾರ್ಟ್ ತಂತ್ರಜ್ಞರ’ ತವರೂರಾಗಿದೆ. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದ ಜೊತೆಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಭಾಷೆಯ ಪ್ರಾಥಮಿಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಪದವಿ ಮುಗಿಯುವ ಹೊತ್ತಿಗೆ ಉದ್ಯೋಗದ ಪತ್ರದೊಂದಿಗೆ ಹೊರಬರುವಂತಾಗಬೇಕು,” ಎಂದು ಆಶಿಸಿದರು.
ಟೊಯೋಟಾ ಕಂಪನಿಯ ಟೀಮ್ ಲೀಡರ್ ಶ್ರೀ ಮನೋಜ್ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸತೀಶ್ ಮತ್ತು ತರಬೇತಿ ಅಧಿಕಾರಿ ಶ್ರೀ ಗುರುದತ್ ಅವರು ಉಪಸ್ಥಿತರಿದ್ದರು.
