

ಕಳಸ ಲೈವ್ ವರದಿ:
ಪ್ರತಿಷ್ಠಿತ ‘ಕರ್ನಾಟಕ ಸಹಕಾರ ಶಿರೋಮಣಿ–೨೦೨೫’ ಪ್ರಶಸ್ತಿಗೆ ಭಾಜನರಾದ ಕಳಸದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಅವರನ್ನು ಕಳಸ ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ಗೌರವಿಸಲಾಯಿತು.
ಸಹಕಾರ ಕ್ಷೇತ್ರವು ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಲ್ಲ, ಅದು ಸಮಾಜ ಪರಿವರ್ತನೆಯ ಶಕ್ತಿಯೆಂಬುದನ್ನು ತಮ್ಮ ಕಾರ್ಯಶೈಲಿಯಿಂದ ಸಾಬೀತುಪಡಿಸಿದವರು ಜಿ.ಕೆ. ಮಂಜಪ್ಪಯ್ಯನವರು. ಕಳೆದ ಮೂರು ದಶಕಗಳಿಂದ ಅವರು ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ನಿರಂತರ ಶ್ರಮಿಸಿದ್ದಾರೆ.
ಕೃಷಿಕರಿಗೆ ಸುಲಭ ಸಾಲ ಸೌಲಭ್ಯ, ಗೊಬ್ಬರ ವಿತರಣೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವ ಮೂಲಕ ರೈತರ ವಿಶ್ವಾಸಾರ್ಹ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸುಸಜ್ಜಿತ ಕಟ್ಟಡಗಳು, ಗೋದಾಮುಗಳ ನಿರ್ಮಾಣ, ಜೊತೆಗೆ ರೈತರಿಗೆ ಅಗತ್ಯವಾದ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸಹಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನೀಡುವಲ್ಲಿ ಅವರು ಮಾದರಿಯಾಗಿದ್ದಾರೆ. ಪಕ್ಷಭೇದ ಮರೆತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ಅವರ ಗುಣವೇ ಅವರನ್ನು ಸತತವಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವAತೆ ಮಾಡಿದೆ. ಕೇವಲ ಸಾಲ ವಿತರಣೆಗೆ ಮಾತ್ರ ಸೀಮಿತವಾಗದೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿಯೂ ಸಹಕಾರಿ ಸಂಸ್ಥೆಗಳ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಜಿ.ಕೆ. ಮಂಜಪ್ಪಯ್ಯನವರ ಸೇವೆಯಿಂದಾಗಿ ಈ ಭಾಗದ ಸಾವಿರಾರು ಕುಟುಂಬಗಳು ಇಂದು ಆರ್ಥಿಕವಾಗಿ ಸ್ವಾವಲಂಬಿಗಳಾಗಿವೆ ಎಂದು ಬಿಜೆಪಿ ಮುಖಂಡರು ಪ್ರಶಂಸಿಸಿದರು.
ಇವರ ಗಣನೀಯ ಸೇವೆಯನ್ನು ಪರಿಗಣಿಸಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಗಳ ವತಿಯಿಂದ ಜನವರಿ ೨೪ ರಂದು ಬೆಂಗಳೂರಿನ ವಸಂತನಗರದಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಗೌರವ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ದೀಪಕ್ ದೊಡ್ಡಯ್ಯ, ಶೇಷಗಿರಿ, ನಾಗಭೂಷನ್, ನಾಗೇಶ್ ಭಟ್, ಸುಜಯ ಸದಾನಂದ, ಮಹೇಶ್ ಬಿ.ಕೆ., ಸುಂದರ ಶೆಟ್ಟಿ, ಕಾರ್ತಿಕ್ ಶಾಸ್ತಿçÃ, ರಂಗನಾಥ್, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
